ಬೆಂಗಳೂರು: ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿದ್ದ ರವಿ ಡಿ ಚೆನ್ನಣ್ಣವರ್ ತೆರವಾದ ಬಳಿಕ ಡಿಸಿಪಿ ರಮೇಶ್ ಅಧಿಕಾರ ಸ್ವೀಕಾರ ಮಾಡಿದ್ದು, ಪಶ್ಚಿಮ ವಿಭಾಗ ವ್ಯಾಪ್ತಿಯಲ್ಲಿರುವ ರೌಡಿಗಳನ್ನು ನಗರದ ಫ್ರೀಡಮ್ ಪಾರ್ಕ್ಗೆ ಬರಲು ಹೇಳಿ, ಖಡಕ್ ವಾರ್ನಿಂಗ್ ನೀಡಲಾಗಿದೆ.
ಇನ್ನು ಇವರೆಲ್ಲಾ ಸಿಲಿಕಾನ್ ಸಿಟಿಯ ಪಶ್ವಿಮ ವಿಭಾಗ ವ್ಯಾಪ್ತಿಯಲ್ಲಿ ಸರಗಳ್ಳತನ, ಮನೆಗಳ್ಳತನ, ರೌಡಿ ಚಟುವಟಿಕೆ, ಹಲ್ಲೆ ಹೀಗೆ ನಾನಾ ಪ್ರಕರಣದಲ್ಲಿ ಭಾಗಿಯಾಗಿದ್ದರು. ಹೀಗಾಗಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಇಂದು ರೌಡಿಗಳಿಗೆ ಬುಲಾವ್ ನೀಡಲಾಗಿತ್ತು.
ಪಶ್ಚಿಮ ವಿಭಾಗದ ಪೊಲೀಸರಿಂದ ರೌಡಿಗಳ ಪರೇಡ್ ಇನ್ನು ಪಶ್ಚಿಮ ವಿಭಾಗದ ಡಿಸಿಪಿಯಾಗಿ ರಮೇಶ್ ಬಂದ ಮೇಲೆ ಮೊದಲ ಬಾರಿಗೆ ರೌಡಿಗಳ ಪರೇಡ್ ಆಗಿದ್ದು, ಪರೇಡ್ನಲ್ಲಿ ಖ್ಯಾತ ರೌಡಿಗಳಾದ ಗೊರಿಲ್ಲ ಅಲಿಯಾಸ್ ಶ್ರೀಧರ್, ತಿರುಮಲ ಅಲಿಯಾಸ್ ತಿಮ್ಮ, ಪುನೀತ್ ಅಲಿಯಾಸ್ ಚಿಕ್ಕ ಗೊರಿಲ್ಲ ಸೇರಿದಂತೆ 400 ಕ್ಕೂ ಹೆಚ್ಚು ರೌಡಿಗಳು ಭಾಗಿಯಾಗಿದ್ದಾರೆ. ಇನ್ನು ಡಿಸಿಪಿ ರಮೇಶ್, ಇನ್ಮುಂದೆ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ನಗರ ಆಯುಕ್ತ ಅಲೋಕ್ ಕುಮಾರ್, ಅಪರಾಧ ಪ್ರಕರಣಗಳನ್ನ ತಡೆಗಟ್ಟಬೇಕು, ಸಿಲಿಕಾನ್ ಸಿಟಿಯನ್ನ ಜನಸ್ನೇಹಿ ಸಿಟಿಯನ್ನಾಗಿ ಮಾಡಬೇಕು ಎಂದು ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಹೀಗಾಗಿ ಸಿಲಿಕಾನ್ ಸಿಟಿಯ ಎಲ್ಲಾ ಹಿರಿಯ ಅಧಿಕಾರಿಗಳು ಫುಲ್ ಅಲರ್ಟ್ ಆಗಿ ರೌಡಿಗಳ ಚಳಿ ಬಿಡಿಸುತ್ತಿದ್ದಾರೆ.