ಬೆಂಗಳೂರು: ಚಿಕ್ಕೋಡಿಯಿಂದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ರಮೇಶ ಕತ್ತಿ ತೀವ್ರ ಅಸಮಾಧಾನಗೊಂಡಿದ್ದು, ಪಕ್ಷ ಬಿಡಲು ಮುಂದಾಗಿರುವ ಅವರಿಗೆ ಗಾಳ ಹಾಕುವ ಯತ್ನವನ್ನು ಕಾಂಗ್ರೆಸ್ ಮಾಡಿದೆ ಎನ್ನಲಾಗುತ್ತಿದೆ.
ಅಸಮಾಧಾನಗೊಂಡ ರಮೇಶ ಕತ್ತಿಗೆ ಗಾಳ ಹಾಕಲು ಸಜ್ಜಾಗಿರುವ ಕಾಂಗ್ರೆಸ್, ಅವರು ಒಪ್ಪಿದ್ದೇ ಆದಲ್ಲಿ ಚಿಕ್ಕೋಡಿಯಿಂದ ಕಣಕ್ಕಿಳಿಸಲು ಸಜ್ಜಾಗಿದೆ. ಈಗಾಗಲೇ ಚಿಕ್ಕೋಡಿಯಿಂದ ನಾಮಪತ್ರ ಸಲ್ಲಿಸಿದ ಪ್ರಕಾಶ ಹುಕ್ಕೇರಿ ಅವರನ್ನು ದಲಿಸಲು ಕಾಂಗ್ರೆಸ್ ಚಿಂತನೆ ಕೂಡ ನಡೆಸಿದೆ ಎನ್ನಲಾಗಿದೆ.
ಬೆಳಗಾವಿಯಿಂದ ಪ್ರಕಾಶ್ ಹುಕ್ಕೇರಿ?
ರಮೇಶ ಕತ್ತಿಗೆ ಚಿಕ್ಕೋಡಿ ಟಿಕೆಟ್ ನೀಡಿದರೆ, ಪ್ರಕಾಶ ಹುಕ್ಕೇರಿಗೆ ಬೆಳಗಾವಿಯಿಂದ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಪ್ರಕಾಶ ಹುಕ್ಕೇರಿ ಬೆಳಗಾವಿಯಿಂದ ಕಣಕ್ಕಿಳಿದರೆ ಬೆಂಬಲಿಸಲು ಉಮೇಶ ಕತ್ತಿ ಸಜ್ಜಾಗಿದ್ದಾರೆ ಎನ್ನಲಾಗಿದೆ. ರಮೇಶ ಕತ್ತಿ ಕಾಂಗ್ರೆಸ್ಗೆ ಬಂದರೆ ಬೆಳಗಾವಿ ಹಾಗೂ ಚಿಕ್ಕೋಡಿ ಎರಡನ್ನು ಗೆಲ್ಲುವ ಕನಸು ಕೈ ಪಾಳಯದ್ದಾಗಿದೆ. ಇದಲ್ಲದೇ ಈಗಾಗಲೇ ಸಾಧುನವರ ಕೂಡ ಬೆಳಗಾವಿಯಿಂದ ಕೈ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಪರ್ಯಾಯ ಮಾರ್ಗ ಹುಡುಕಲಾಗುತ್ತಿದೆ.
ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯರ ಬಳಿ ಮನವಿ ಮಾಡಲಾಗಿದ್ದು, ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹಾಗೂ ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.