ಬೆಂಗಳೂರು: ವಿವಾಹಿತೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಜೈಲಿಗಟ್ಟಿದ್ದಕ್ಕೆ ದ್ವೇಷ ಸಾಧಿಸಿದ ಆರೋಪಿ ವಿವಾಹಿತೆಯ ಗಂಡನನ್ನೇ ತನ್ನ ಸಹಚರರ ಜೊತೆಗೂಡಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯ ಸಹಚರರು ಸಿಕ್ಕಿಬಿದ್ದಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ರವೀಶ್ ಅಲಿಯಾಸ್ ರವಿ, ಜಿತೇಂದ್ರ ಅಲಿಯಾಸ್ ಜಿತು, ಸುಮಂತರಾಜ್ ಅಲಿಯಾಸ್ ಸುಮಂತ್, ಪ್ರದೀಪ್ ಕುಮಾರ್ ಅಲಿಯಾಸ್ ಪ್ರದೀಪ ಬಂಧಿತ ಆರೋಪಿಗಳು. ಆದರೆ, ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಎಂಬಾತ ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಪ್ರಕರಣ..
ರಾಜಗೋಪಾಲನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಂಡ್ಯ ಮೂಲದ ಉಮೇಶ್ ಎಂಬುವರು ಕಬಾಬ್ ಅಂಗಡಿಯನ್ನ ನಡೆಸುತ್ತಿದ್ರು. 13 ವರ್ಷಗಳ ಹಿಂದೆಯೇ ರೂಪಾ ಎಂಬ ಯುವತಿಯನ್ನ ಮದುವೆಯಾಗಿದ್ರು. ಇದೇ ತಿಂಗಳ 12ರಂದು ರಾತ್ರಿ 9:30 ರ ಸುಮಾರಿಗೆ ಉಮೇಶ್ ಅಂಗಡಿಯಲ್ಲಿರುವಾಗ, ಕಿಶೋರ್ ಎಂಬಾತ ತನ್ನ ನಾಲ್ವರು ಸಹಚರರೊಂದಿಗೆ ಉಮೇಶ್ ಕಣ್ಣಿಗೆ ಖಾರದ ಪುಡಿ ಎರಚಿ, ಲಾಂಗು, ಮಚ್ಚು, ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಇದು ಕೊಲೆಗೆ ಕಾರಣ...
ಈ ಪ್ರಕರಣದ ಬಗ್ಗೆ ಉತ್ತರ ವಿಭಾಗದ ಪೊಲೀಸರು ತನಿಖೆ ನಡೆಸಿದ್ದಾರೆ. ಆರೋಪಿ ಕಿಶೋರ್ ಎಂಬುವನು ಮೃತ ಉಮೇಶ್ ಪತ್ನಿ ರೂಪಾಳೊಂದಿಗೆ 7-8 ತಿಂಗಳಿನಿಂದ ಸ್ನೇಹ ಬೆಳೆಸಿಕೊಂಡು ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಬಳಿಕ ಕಿಶೋರ್ ಹಾಗೂ ರೂಪಾ ನಡುವೆ ಗಲಾಟೆಯಾಗಿತ್ತು. ಇದಕ್ಕೆ ಕಿಶೋರ್ ಪ್ರತೀಕಾರವಾಗಿ ತಾನು ರೂಪಾಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ಆಕೆಗೆ ಗೊತ್ತಿಲ್ಲದ ರೀತಿ ವಿಡಿಯೋ ರೆಕಾರ್ಡ್ ಮಾಡಿ, ಫೇಸ್ಬುಕ್ ಖಾತೆಗೆ ಹಾಕಿದ್ದ. ಇದಕ್ಕೆ ರೂಪಾ ಗಂಡ ಉಮೇಶ್, ರಾಜಾಗೋಪಾಲ ಠಾಣೆಗೆ ತೆರಳಿ ದೂರು ನೀಡಿದ್ದ. ಬಳಿಕ ಪೊಲೀಸರು ಪ್ರಕರಣದ ಆರೋಪಿ ಕಿಶೋರ್ನನ್ನ ಬಂಧಿಸಿ ಜೈಲಿಗೆ ಅಟ್ಟಿದ್ರು. ನಂತರ ಆರೋಪಿ ಕಿಶೋರ್ ಹೊರಗೆ ಬಂದು ತನ್ನ ನಾಲ್ಕು ಸಹಚರರ ಜೊತೆ ಸೇರಿಕೊಂಡು ಕಿಶೋರ್ನನ್ನ ಕೊಲೆ ಮಾಡಿದ್ದಾನೆ.
ಸದ್ಯ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಕಿಶೋರ್ನ ಸಹಚರರಾದ ನಾಲ್ವರನ್ನ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಕಿಶೋರ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.