ಕರ್ನಾಟಕ

karnataka

ETV Bharat / state

ಸಾಲಮನ್ನಾ ವಿಚಾರವಾಗಿ ಮಂಡ್ಯ ಪಕ್ಷೇತರ ಅಭ್ಯರ್ಥಿ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ : ಹೆಚ್​ಡಿಕೆ ಆರೋಪ - ಸುಮಲತಾ

ಹಣಕಾಸು ಇಲಾಖೆ ಅಧಿಕಾರಿಗಳು ರೈತರ ಸಾಲಮನ್ನಾ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾದ ಅವರ ಹೇಳಿಕೆ ಸತ್ಯಕ್ಕೆ ದೂರವಾದುದು. ಸುಮ್ಮನೆ ಹುರುಳಿಲ್ಲದ ಗಂಭೀರ ಆರೋಪ ಮಾಡುವ ಮುನ್ನ ವಸ್ತು ಸ್ಥಿತಿ ಅರಿತು ಮಾತನಾಡುವುದು ಸೂಕ್ತ. ಸುಮಲತಾ ಹೇಳಿಕೆಗೆ ಸಿಎಂ ಗರಂ

ಹೆಚ್​ಡಿಕೆ

By

Published : Apr 5, 2019, 4:38 PM IST

ಬೆಂಗಳೂರು: ಸಾಲಮನ್ನಾ ಕುರಿತು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಣಕಾಸು ಇಲಾಖೆ ಅಧಿಕಾರಿಗಳು ರೈತರ ಸಾಲಮನ್ನಾ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾದ ಅವರ ಹೇಳಿಕೆಯು ಸತ್ಯಕ್ಕೆ ದೂರವಾದುದು. ಈ ಹೇಳಿಕೆಯು ಸತ್ಯಕ್ಕೆ ದೂರವಾದುದು ಎಂದು ಸ್ವತಃ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ನಾನು ಕೂಡ ಅವರೊಂದಿಗೆ ಚರ್ಚಿಸಿದ್ದು, ತಾವು ಅಂತಹ ಮಾತುಗಳನ್ನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಇಂತಹ ಗೊಂದಲಕಾರಿ ಹೇಳಿಕೆ ನೀಡಿ ನಾಡಿನ ಜನರ ಅದರಲ್ಲೂ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುಮ್ಮನೆ ಹುರುಳಿಲ್ಲದ ಗಂಭೀರ ಆರೋಪ ಮಾಡುವ ಮುನ್ನ ವಸ್ತು ಸ್ಥಿತಿ ಅರಿತು ಮಾತನಾಡುವುದು ಸೂಕ್ತ ಎಂದು ತಿಳಿಸಿದ್ದಾರೆ.

ಮಂಡ್ಯದ ಪಕ್ಷೇತರ ಅಭ್ಯರ್ಥಿ ಯಾವುದೇ ಮಾಹಿತಿ ಇಲ್ಲದೆ ಜನರ ದಿಕ್ಕು ತಪ್ಪಿಸುವ ಮಾತಾಡಿದ್ದಾರೆ. ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕುಗಳಿಂದ 15.58 ಲಕ್ಷ ರೈತರಿಗೆ 6223.48 ಕೋಟಿ ರೂ. ಸಾಲಮನ್ನಾ ಮೊತ್ತ ಮಂಜೂರು ಮಾಡಲಾಗಿದೆ. 2019-20 ರ ಆಯವ್ಯಯದಲ್ಲಿ 12000 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಮಾಹಿತಿ ವೆಬ್ ಸೈಟಿನಲ್ಲಿಯೂ ಲಭ್ಯವಿದೆ. ಕೃಷಿಕರ ಬಗ್ಗೆ ನನ್ನ ಬದ್ಧತೆಯ ಕುರಿತು ಅವರು ಮಾತನಾಡುವ ಅಗತ್ಯವಿಲ್ಲ. ಕಳೆದ ಎರಡು ಆಯವ್ಯಯಗಳಲ್ಲಿ ಘೋಷಿಸಿ ಜಾರಿಗೊಳಿಸುತ್ತಿರುವ ದೂರದೃಷ್ಟಿಯ ಕಾರ್ಯಕ್ರಮಗಳೇ ನಮ್ಮ ರೈತಪರ ಕಾಳಜಿಗೆ ಸಾಕ್ಷಿ ಎಂದರು.

ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ನಮ್ಮ ಮೈತ್ರಿ ಸರ್ಕಾರ ಕೈಗೊಂಡಿರುವ ಕ್ರಮ ಸಾಲ ಮನ್ನಾ ಒಂದೇ ಅಲ್ಲ. ಬಿತ್ತನೆಯಿಂದ ಬೆಳೆ ಸಂಸ್ಕರಣೆ, ಸಂಗ್ರಹಣೆ ವರೆಗೆ ಎಲ್ಲ ಹಂತದಲ್ಲೂ ನೆರವು ನೀಡಲು ನಮ್ಮ ಸರ್ಕಾರ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 46 ಸಾವಿರ ಕೋಟಿ ರೂ. ಗಳಿಗೂ ಅಧಿಕ ಮೊತ್ತ ನಮ್ಮ ಸರ್ಕಾರ ಒದಗಿಸಿದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details