ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ನಗರದಲ್ಲಿನ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳ ಮೇಲೆ ಕಣ್ಣಿಟ್ಟಿರುವ ಪೊಲೀಸರು, ಚುನಾವಣಾಧಿಕಾರಿಗಳು ಅಲರ್ಟ್ ಆಗಿದ್ದಾರೆ.
ಬೆಂಗಳೂರು ದಕ್ಷಿಣ, ಬೆಂ. ಉತ್ತರ, ಬೆಂ. ಕೇಂದ್ರ, ಬೆಂ. ಗ್ರಾಮಾಂತರದಲ್ಲಿ ಮತದಾನ ನಡೆಯುತ್ತವೆ. ಈ ಪ್ರದೇಶದಲ್ಲಿ ಒಟ್ಟು 7,577 ಮತಗಟ್ಟೆಗಳಿದ್ದು, ಅದರಲ್ಲಿ 1,403 ಸೂಕ್ಷ ಹಾಗೂ 6,174 ಸಾಧಾರಣ ಮತಗಟ್ಟೆಗಳೆಂದು ವಿಂಗಡನೆ ಮಾಡಿ, ಭದ್ರತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಒಂದೊಂದು ಮತಗಟ್ಟೆಗಳಲ್ಲಿ ಒಬ್ಬ ಹೆಡ್ ಕಾನ್ಸ್ಟೇಬಲ್, ಕಾನ್ಸ್ಟೇಬಲ್ಗಳನ್ನನೇಮಿಸಿದ್ದು, ಸೂಕ್ಷ ಮತಗಟ್ಟೆ ಪ್ರದೇಶಗಳಲ್ಲಿ ಕಾನ್ಸ್ಟೇಬಲ್ಜೊತೆ ಹಿರಿಯ ಅಧಿಕಾರಿಗಳ ಕಣ್ಗಾವಲೂ ಇರಲಿದೆ. ಸೂಕ್ಷ ಮತಗಟ್ಟೆಗಳ ಬಳಿ ಸಿಸಿಟಿವಿ ಅಳವಡಿಸಿ, ಪೊಲೀಸರು ಗಸ್ತು ತಿರುಗಲಿದ್ದಾರೆ. ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಿದ್ದು, ಅವರೂ ಮತದಾನದ ಎಲ್ಲ ವಿಧಿ ವಿಧಾನಗಳನ್ನ ತಿಳಿದುಕೊಳ್ಳಬೇಕಿದೆ. ಒಂದು ವೇಳೆ ಯಾರಾದರೂ ಮತಗಟ್ಟೆಗಳ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಡುವುದು ಅಥವಾ ಎಲೆಕ್ಷನ್ ನಿಯಮಗಳಿಗೆ ವಿರುದ್ದವಾಗಿ ನಡೆದುಕೊಳ್ಳುವುದು ಕಂಡು ಬಂದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಈಗಾಗಲೇ ಈ ಹಿಂದೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣಾ ಮತಗಟ್ಟೆಗಳಲ್ಲಿ ಜರುಗಿದ ಘಟನೆಗಳ ಪಟ್ಟಿಯನ್ನೂ ಪೊಲೀಸರು ತಯಾರಿಸಿದ್ದು, ಆಯಾ ಸ್ಥಳಗಳಲ್ಲಿ ಹೆಚ್ಚುವರಿ ಭದ್ರತೆ ನೀಡಲಾಗಿದೆ. ಬೆಂ.ದಕ್ಷಿಣ ಮತ್ತು ಕೇಂದ್ರ ಭಾಗದಲ್ಲೇ ಅತಿ ಹೆಚ್ಚು ಸೂಕ್ಷ ಮತಗಟ್ಟೆಗಳಿವೆ ಎಂಬುದನ್ನು ಗುರುತಿಸಲಾಗಿದ್ದು, ಅಲ್ಲಿ ಹೆಚ್ಚಿನ ಖಾಕಿ ಕಣ್ಗಾವಲು ಇರಲಿದೆ.