ಬೆಂಗಳೂರು: ಒಂದೆಡೆ ಕಸ ತುಂಬಿಕೊಂಡು ಮುಚ್ಚುವ ಸ್ಥಿತಿಗೆ ಕೆರೆಗಳು ತಲುಪಿವೆ. ಮತ್ತೊಂದೆಡೆ ಕಟ್ಟಡ ಕಾಮಗಾರಿ ತ್ಯಾಜ್ಯವನ್ನು ಕೆರೆಗಳಿಗೆ ತಂದು ಸುರಿಯುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಇದು ಕೆಆರ್‌ಪುರಂ ವೆಂಗಯ್ಯನ ಕೆರೆ ಹಾಗೂ ಆವಲಹಳ್ಳಿಯ ಎಲೆಮಲ್ಲಪ್ಪನ ಕೆರೆಗಳ ಸದ್ಯದ ಸ್ಥಿತಿ.
ಆವಲಹಳ್ಳಿಯ ಕೆರೆಯಲ್ಲಿ ಸಾವಿರಾರು ಟನ್ಗಳಷ್ಟು ಕಟ್ಟಡ ತ್ಯಾಜ್ಯವನ್ನು ಪ್ರತಿದಿನ ತಂದು ಸುರಿಯಲಾಗುತ್ತಿದೆ. ರಾತ್ರೋರಾತ್ರಿ ಇಂತಹ ಕುಕೃತ್ಯ ನಡೆಯುತ್ತಿದ್ದು, ಅಧಿಕಾರಿಗಳ ಕಣ್ಣಿಗೆ ಮಾತ್ರ ಬೀಳುತ್ತಿಲ್ಲ. ಹೀಗೆಯೇ ಆದರೆ ಮುಂದಿನ ದಿನಗಳಲ್ಲಿ ಕೆರೆಗಳು ಮಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕೆರೆಗಳ ಒಡಲು ಸೇರುತ್ತಿರುವ ಕಟ್ಟಡ ತ್ಯಾಜ್ಯ ಮೊದಲೇ ಈ ಕೆರೆಗಳಲ್ಲಿ ಹುಲ್ಲು, ಸೊಪ್ಪು ಬೆಳೆದು ಹೂಳು ತುಂಬಿಕೊಂಡು ಕೆರೆ ಸಂಪುರ್ಣ ಮುಚ್ಚಿಕೊಂಡಿದೆ. ಇದರ ನಡುವೆ ಇದಕ್ಕೆ ರಾತ್ರೋ-ರಾತ್ರಿ ಮಣ್ಣು, ಇಟ್ಟಿಗೆ ಸುರಿದು ಮುಚ್ಚಲಾಗುತ್ತಿದೆ. ಸಾಲದ್ದಕ್ಕೆ ಪಾಲಿಕೆ ವಾಹನಗಳಲ್ಲಿ ಸಂಗ್ರಹಿಸಿದ ಕಸವನ್ನು ಇಲ್ಲಿ ಬೇರ್ಪಡಿಸುವ ಕೆಲಸ ಮಾಡಿ ಉಳಿದ ಕಸವನ್ನು ಕೆರೆಗೆ ಸುರಿಯುವುದರಿಂದ ಪರಿಸರ ಕಲುಷಿತಗೊಳ್ಳುವುದರ ಜೊತೆ ದುರ್ನಾಥ ಬೀರುತ್ತಿರುವುದು ಸ್ಥಳೀಯರನ್ನ ಕಂಗೆಡಿಸಿದೆ. ಇದು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಇದೆಲ್ಲಾ ನೇರವಾಗಿ ಕಣ್ಣಿಗೆ ಕಂಡರೂ, ಕೆರೆ ಅಭಿವೃದ್ಧಿ ದೃಷ್ಠಿಯಿಂದ ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು, ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಸುಮ್ಮನಿದ್ದಾರೆ. ಹೀಗಾಗಿ ಈ ಎರಡು ಕೆರೆಗಳು ಬಹುತೇಕ ಅವನತಿಯತ್ತ ತಲುಪಿದ್ದು, ಇನ್ನಾದರೂ ಅಧಿಕಾರಿಗಳು ಏಚ್ಚೆತ್ತುಕೊಂಡು ಕೆರೆಗಳಲ್ಲಿ ತುಂಬಿರುವ ಕಸವನ್ನು ತೆಗೆದು ಕೆರೆಗಳನ್ನು ಅಭಿವೃದ್ದಿ ಪಡಿಸಲಿ ಎಂಬುದು ಸಾರ್ವಜನಿಕರ ಆಗ್ರಹ.