ಬೆಂಗಳೂರು:ಕುಂದಗೋಳ ಶಾಸಕಿ ಕುಸುಮ ಶಿವಳ್ಳಿ ಹಾಗೂ ಚಿಂಚೋಳಿ ಶಾಸಕ ಅವಿನಾಶ್ ಜಾಧವ್ ಇಂದು ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸೌಧದ ತಮ್ಮ ಚೇಂಬರ್ನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಇಬ್ಬರು ನೂತನ ಶಾಸಕರಿಗೆ ಪ್ರತ್ಯೇಕವಾಗಿ ಪ್ರಮಾಣವಚನ ಬೋಧಿಸಿದರು. ನೂತನ ಶಾಸಕರಿಬ್ಬರು ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ಕುಸುಮ ಶಿವಳ್ಳಿ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿರುವ ಕುಸುಮ ಶಿವಳ್ಳಿ ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ, ಪ್ರಮಾಣವಚನ ಸ್ವೀಕಾರ ಮಾಡಿದರು. ರಾಜಕೀಯವಾಗಿ ಏನೇ ಸಲಹೆಗಳು ಬೇಕಾದರು ಕೇಳಮ್ಮ ನಾವು ಸಲಹೆ ನೀಡುತ್ತೇವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಕುಸುಮ ಶಿವಳ್ಳಿಗೆ ಅಭಯ ನೀಡಿದರು. ಜತೆಗೆ ನೀನು ಇನ್ನೂ ಓದಬೇಕು, ಈಗಲೇ ರಾಜಕೀಯದ ಬಗ್ಗೆ ತಲೆ ಕೆಡೆಸಿಕೊಳ್ಳಬಾರದು ಎಂದು ರಮೇಶ್ ಕುಮಾರ್ ಶಿವಳ್ಳಿ ಮಗನಿಗೆ ಕಿವಿಮಾತು ಹೇಳಿದರು.
ಅವಿನಾಶ್ ಜಾಧವ್ ಪ್ರಮಾಣವಚನ ಸ್ವೀಕಾರ ಇನ್ನು, ಸಂಸದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಕೂಡ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ತಂದೆ ಉಮೇಶ್ ಜಾಧವ್, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಉಪಸ್ಥಿತರಿದ್ದರು.