ದೊಡ್ಡಬಳ್ಳಾಪುರ:ಹತ್ತು ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಪೆರಲ್ ಪಾರ್ಕ್ ಶುರುವಾಗುವ ಮೂಲಕ ಸ್ಥಳೀಯ ಸಾವಿರಾರು ಮಂದಿಗೆ ಉದ್ಯೋಗ ದೊರಕಿತ್ತು. ಆದರೆ ಈಗ ನಾನಾ ಕಾರಣದಿಂದ ಅಪೆರಲ್ ಪಾರ್ಕ್ನಲ್ಲಿರುವ ಗಾರ್ಮೆಂಟ್ಸ್ಗಳು ಬಾಗಿಲು ಮುಚ್ಚಿದ್ದು, 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.
ಪಿಣ್ಯದ ನಂತರ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶವು ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ 250ಕ್ಕೂ ವಿವಿಧ ರೀತಿಯ ಕಾರ್ಖಾನೆಗಳಿದ್ದು, ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಸಿದ್ಧ ಉಡುಪು ಉದ್ಯಮ ಬೆಳವಣಿಗೆಗಾಗಿ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಯೇ ಅಪೆರಲ್ ಪಾರ್ಕ್ ಸ್ಥಾಪನೆ ಮಾಡಲಾಗಿತ್ತು. ಇಲ್ಲಿ ಸುಮಾರು 140ಕ್ಕೂ ಹೆಚ್ಚು ಗಾರ್ಮೆಂಟ್ಸ್ ಇದ್ದು, 40 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಕಾರ್ಮಿಕರಿಗೆ ವೇತನ ಕೊಡಲಾರದೆ ಗಾರ್ಮೆಂಟ್ಸ್ ಒಂದೊಂದೇ ಬಾಗಿಲು ಮುಚ್ಚುತ್ತಿವೆ. ಇದರಿಂದ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
ಸ್ಕಾಟ್ಸ್, ಜಸ್ಟ್ ಲವ್, ಬ್ಲೂಮ್ ಕ್ರಾಪ್ಟ್ ಗಾರ್ಮೆಂಟ್ಸ್ಗಳು ಕಾರ್ಮಿಕರಿಗೆ ವೇತನ ಕೊಡಲಾರದೆ ಬಾಗಿಲು ಮುಚ್ಚುತ್ತಿವೆ. ಸ್ಕಾಟ್ಸ್ ತನ್ನ ಕಾರ್ಮಿಕರಿಗೆ ಎರಡು ತಿಂಗಳ ವೇತನ ಹಾಗೂ ಒಂದೂವರೆ ವರ್ಷದ ಪಿಎಫ್ ಹಣ ಕೊಟ್ಟಿಲ್ಲ. ವೇತನ ಕೊಡಲಾರದೆ ಸ್ಕಾಟ್ಸ್ ಬಾಗಿಲು ಮುಚ್ಚಿದ್ದು, 2000 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಗಾರ್ಮೆಂಟ್ಸ್ಗಳು ಬಾಗಿಲು ಮುಚ್ಚಲು ಪ್ರಮುಖ ಕಾರಣವಾಗಿರೋದು ಆಡಳಿತ ಮಂಡಳಿಯ ವೈಫಲ್ಯ, ಮೂಲಭೂತ ಸೌಲಭ್ಯದ ಕೊರತೆ ಮತ್ತು ಕೆಲವು ಸಂಘಟನೆಗಳ ಮಧ್ಯ ಪ್ರವೇಶ ಕಾರಣ ಎನ್ನಲಾಗುತ್ತಿದೆ.
ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರೋದು ಗೌರಿಬಿದನೂರು, ಹಿಂದೂಪುರ, ಕೊರಟಗೆರೆ ಮತ್ತು ಚಿಕ್ಕಬಳ್ಳಾಪುರದ ಮಹಿಳೆಯರು. ಇವರನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಬರಲು ಮತ್ತು ಬಿಡಲು ಬಸ್ ವ್ಯವಸ್ಥೆಯನ್ನು ಗಾರ್ಮೆಂಟ್ಸ್ಗಳೇ ಮಾಡಿವೆ. ಇದರಿಂದ ಕಂಪನಿಯ ಲಾಭದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಚ್ಚೆತ್ತಿರುವ ಮಾಲೀಕರು, ಹಿಂದೂಪುರ, ಗೌರಿಬಿದನೂರಲ್ಲೇ ಗಾರ್ಮೆಂಟ್ಸ್ ತೆರೆಯುವ ಪ್ರಯತ್ನದಲ್ಲಿದ್ದಾರೆ. ಅಲ್ಲದೇ ಇಲ್ಲಿಗೆ ಬರುವ ಕಾರ್ಮಿಕರಿಗೆ 12 ಸಾವಿರಕ್ಕು ಹೆಚ್ಚು ವೇತನ ಕೊಡಬೇಕು. ಗೌರಿಬಿದನೂರು ಮತ್ತು ಹಿಂದೂಪುರದಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರು ಸಿಗುತ್ತಾರೆ ಅನ್ನೋ ದುರಾಸೆ ಕೂಡ ಕಾರ್ಖಾನೆ ಮಾಲೀಕರದ್ದು ಎನ್ನಲಾಗಿದೆ.