ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದ್ದು, ಪ್ರತಿಯೊಬ್ಬರೂ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.
ಉಚಿತ ಆರೋಗ್ಯ ಶಿಬಿರಗಳ ಮೇಲೆ ತಾತ್ಸಾರ ಸಲ್ಲದು: ಶಾಸಕ ಎಸ್.ಆರ್.ವಿಶ್ವನಾಥ್ - free health camp
ರಾಮಯ್ಯ ಐಎನ್‍ಡಿಐಸಿ ಆಸ್ಪತ್ರೆ, ರಂಗಲಕ್ಷ್ಮಿ ನೇತ್ರಾಲಯ, ಸ್ಪರ್ಷ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ, ಶ್ರೀಕೃಷ್ಣದೇವರಾಯ ದಂತ ವಿಜ್ಞಾನ ಕಾಲೇಜುಗಳ ನುರಿತ ವೈದ್ಯರು ತಪಾಸಣೆಯಲ್ಲಿ ಭಾಗವಹಿಸಿದ್ದರು. ಹೃದ್ರೋಗ, ಮಧುಮೇಹ, ರಕ್ತದೊತ್ತಡ ಚಿಕಿತ್ಸೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಸಾರ್ವಜನಿಕರು ತಪಾಸಣೆ ಮಾಡಿಸಿಕೊಂಡರು.
ಯಲಹಂಕ ಉಪನಗರದ ಬಿಬಿಎಂಪಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ 4ನೇ ವರ್ಷದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಒತ್ತಡದ ಜೀವನದಿಂದಾಗಿ ಆಸ್ಪತ್ರೆಗೆ ತೆರಳಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅದರ ನಡುವೆಯೂ ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉಚಿತ ಆರೋಗ್ಯ ಶಿಬಿರ ಎಂದರೆ ತಾತ್ಸಾರ ಮನೋಭಾವ ತೋರಬಾರದು. ಇಂಥ ಆರೋಗ್ಯ ಶಿಬಿರಗಳು ನಡೆದಾಗ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಯಲಹಂಕ ಉಪನಗರ ಬಿಬಿಎಂಪಿ ಸದಸ್ಯ ಎಂ. ಸತೀಶ್, ಮಾಜಿ ಸದಸ್ಯ ಎಂ. ಮುನಿರಾಜು, ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಎ.ಸಿ. ಮುನಿಕೃಷ್ಣಪ್ಪ, ಯಲಹಂಕ ಉಪನಗರ ವಾರ್ಡ್ ಬಿಜೆಪಿ ಅಧ್ಯಕ್ಷ ಎಸ್.ರಾಜಣ್ಣ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವೀಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯ್‍ಕುಮಾರ್ ಇದ್ದರು.
TAGGED:
free health camp