ಬೆಂಗಳೂರು : ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಪದ್ಮನಾಭನಗರದ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ಸೋಮವಾರ ನಾನು ನಾಮಪತ್ರ ಸಲ್ಲಿಸುತ್ತೇನೆ. ನಮಗೆ ಯಾವೆಲ್ಲಾ ಕ್ಷೇತ್ರ ಬಿಟ್ಟು ಕೊಡಲಾಗಿದೆಯೋ ಎಲ್ಲಾಕಡೆ ಅಭ್ಯರ್ಥಿಗಳನ್ನು ಹಾಕುತ್ತೇವೆ. ಜೆಡಿಎಸ್ನ ಅಭ್ಯರ್ಥಿಗಳ ಪಟ್ಟಿಅಂತಿಮವಾಗಿದೆ. ಯಾವುದೂ ಬಾಕಿ ಇಲ್ಲ ಎಂದು ಹೇಳಿದರು.
ತುಮಕೂರು, ಮಂಡ್ಯ, ಹಾಸನ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ವಿಜಯಪುರ ಜಿಲ್ಲೆಯ ಅಭ್ಯರ್ಥಿ ಹೆಸರೊಂದು ಅಂತಿಮಗೊಳಿಸುವುದು ಬಾಕಿ ಇದೆ. ಅದೇನೂ ದೊಡ್ಡ ವಿಷಯ ಅಲ್ಲ ಎಂದರು.
ಇದೇ ವೇಳೆ ವಿಜಯಪುರ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಪಡೆಯಲು ಮಾಜಿ ಶಾಸಕ ಆರ್.ಕೆ.ಸುನೀಲ್ ರಾಥೋಡ್ ಪ್ರಯತ್ನಿಸುತ್ತಿದ್ದು, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಟಿಕೆಟ್ಗೆ ಮನವಿ ಮಾಡಿದ್ದಾರೆ.
ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಸುನೀಲ್ ರಾಥೋಡ್, ವಿಜಯಪುರ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿ. ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರ ಜೊತೆ ಮಾತನಾಡಿದ್ದೇನೆ. ಶಾಸಕ ದೇವಾನಂದ್ ಚೌಹಣ್ ಜೊತೆ ಸಹ ಚರ್ಚಿಸಿದ್ದೇನೆ. ಅವರ ಕುಟುಂಬದಲ್ಲಿ ಯಾರು ಸ್ಪರ್ಧಿಸಲ್ಲವೆಂದು ಹೇಳಿದ್ದಾರೆ. ದೇವೇಗೌಡರು ನನ್ನ ಹೆಸರನ್ನೇ ಶಿಫಾರಸ್ಸು ಮಾಡಿದ್ದಾರೆ. ಇಂದು ದೇವೇಗೌಡರು ಸಿಎಂ ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ನನಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.