ಬೆಂಗಳೂರು: ವಿಧಾನಸೌಧದಲ್ಲಿಕಳೆದ ಎರಡು ಮೂರು ದಿನಗಳಿಂದ ಕಡತ ವಿಲೇವಾರಿ ಇದ್ದಕ್ಕಿದ್ದಂತೆ ಚುರುಕು ಪಡೆದಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಸುಮಾರು ಎರಡು ತಿಂಗಳಿಂದ ವಿಳಂಬವಾಗಿದ್ದ ಕಡತಗಳ ವಿಲೇವಾರಿಯನ್ನ ಸಚಿವರು ಶರವೇಗದಲ್ಲಿ ಮಾಡುತ್ತಿದ್ದಾರೆ.
ಸಚಿವರುಗಳು ತಡರಾತ್ರಿವರೆಗೆ ವಿಧಾನಸೌಧದ ತಮ್ಮ ಕಚೇರಿಗಳಲ್ಲಿ ಕೂತು ರಾಶಿ ಬಿದ್ದಿರುವ ಕಡತಗಳಿಗೆ ಸಹಿ ಹಾಕುತ್ತಿದ್ದಾರೆ.
ಅಚಾನಕ್ ಚುರುಕು ಪಡೆದ ಕಡತ ವಿಲೇವಾರಿಗೆ ಕಾರಣ ಏನು? :
ಕಡತ ವಿಲೇವಾರಿ ಚುರುಕು ಪಡೆದಿರುವ ಬಗ್ಗೆ ಕೇಳಿದರೆ, ಲೋಕಸಭಾ ಚುನಾವಣಾ ನೀತಿ ಸಂಹಿತೆ ನೆವ ಹೇಳ್ತಿದ್ದಾರೆ ಕೆಲ ಸಚಿವರು. ಆದರೆ, ವಿಧಾನಸೌಧದ ಪಡಸಾಲೆಯಲ್ಲಿ ಕಡತ ವಿಲೇವಾರಿಯ ಹಿಂದೆ ಬೇರೆ ಕಾರಣನೂ ಇದೆ ಎಂಬ ಮಾತುಗಳು ಹರಿದಾಡುತ್ತಿವೆ. ಅದೇನಂದ್ರೆ, ಮೈತ್ರಿ ಸರ್ಕಾರ ಮುಂದುವರಿಯುವ ಬಗ್ಗೆ ಅನುಮಾನ ಮೂಡಿರುವುದರಿಂದ ಸಚಿವರುಗಳು ಕಳೆದ ಎರಡು ಮೂರು ದಿನಗಳಿಂದ ಬಾಕಿ ಉಳಿದುಕೊಂಡಿರುವ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ ಎಂಬ ಮಾತುಗಳು ಸದ್ದು ಮಾಡುತ್ತಿವೆ
ವಿಧಾದನಸೌಧದಲ್ಲಿ ಕಡತ ವಿಲೇವಾರಿ ಇದ್ದಕ್ಕಿದ್ದಂತೆ ಚುರುಕು ಪಡೆದಿದ್ದು, ಅಧಿಕಾರಿಗಳು ಬ್ಯೂಸಿಯಾಗಿದ್ದಾರೆ. ಅದರಲ್ಲೂ ಸಚಿವೆ ಜಯಮಾಲಾ, ಸಚಿವ ಯು.ಟಿ.ಖಾದರ್ ರಾತ್ರಿವರೆಗೆ ವಿಧಾನಸೌಧದಲ್ಲಿ ಕೂತು ಕಡತಗಳನ್ನು ವಿಲೇವಾರಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ಸಚಿವ ಡಿ.ಸಿ.ತಮ್ಮಣ್ಣ, ವೆಂಕಟ್ ರಾವ್ ನಾಡಗೌಡ, ಎಚ್.ಡಿ.ರೇವಣ್ಣ, ಡಿಸಿಎಂ ಡಾ.ಜಿ.ಪರಮೇಶ್ವರ್, ಪುಟ್ಟರಂಗ ಶೆಟ್ಟಿ ಸೇರಿದಂತೆ ಹಲವು ಸಚಿವರು ವಿಧಾನಸೌಧದಲ್ಲಿ ಮೊಕ್ಕಾಂ ಹೂಡಿ, ಕಡತ ವಿಲೇವಾರಿಗೆ ಚುರುಕು ನೀಡಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಿಗೆ ಸಿಕ್ಕಿದೆ.
ಒಂದೆಡೆ ಮೈತ್ರಿ ಸರ್ಕಾರ ಮುಂದುವರಿಕೆ ಸಂಬಂಧ ಇರುವ ಅನುಮಾನ, ಇನ್ನೊಂದೆಡೆ ಸಚಿವ ಸ್ಥಾನ ಕಳಕೊಳ್ಳುವ ಆತಂಕ. ಈ ಹಿನ್ನೆಲೆಯಲ್ಲಿ ಕೆಲ ಸಚಿವರು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಕಡತಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡುತ್ತಿದ್ದಾರೆ ಎಂಬ ಮಾತು ಶಕ್ತಿಸೌಧದ ಪಡಸಾಲೆಯಲ್ಲಿ ಜೋರಾಗಿ ಕೇಳಿ ಬರುತ್ತಿದೆ.