ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ರಿವರ್ಸ್ ಆಪರೇಷನ್ ಮಾಡಬಹುದು ಎನ್ನುವ ಭೀತಿ ಬಿಜೆಪಿಗಿದೆ. ಇದೇ ಕಾರಣಕ್ಕೆ ತನ್ನೆಲ್ಲ ಶಾಸಕರನ್ನೂ ಒಂದೆಡೆ ಹಿಡಿದಿಟ್ಟುಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಹಾಗಾಗಿಬಿಜೆಪಿ ಶಾಸಕರೂ ಸಹ ರೆಸಾರ್ಟ್ ಸೇರಿದ್ದಾರೆ.
ಬಿಜೆಪಿಗೆ ರಿವರ್ಸ್ ಆಪರೇಷನ್ ಭೀತಿ.. ರಮಡ ರೆಸಾರ್ಟ್ನತ್ತ ಕೇಸರಿ ಪಾಳಯದ ಶಾಸಕರು.. - ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್
ಮೈತ್ರಿ ಪಕ್ಷಗಳ ರಿವರ್ಸ್ ಆಪರೇಷನ್ನಿಂದ ತಪ್ಪಿಸಿಕೊಳ್ಳಲು ಬಿಜೆಪಿ ತನ್ನೆಲ್ಲ ಶಾಸಕರನ್ನೂ ಯಲಹಂಕದ ರಮಡ ರೆಸಾರ್ಟ್ಗೆ ಸ್ಥಳಾಂತರಿಸಲು ಮುಂದಾಗಿದೆ. ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಇದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ರಿವರ್ಸ್ ಆಪರೇಷನ್ನಿಂದ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿರುವ ಬಿಜೆಪಿ, ಯಲಹಂಕದ ಹೊನ್ನೇನಹಳ್ಳಿಯ ರಮಡ ರೆಸಾರ್ಟ್‌ನಲ್ಲಿ 35 ಕೊಠಡಿಗಳನ್ನು ಬುಕ್ ಮಾಡಿದೆ. ಯಲಹಂಕ-ದೊಡ್ಡಬಳ್ಳಾಪುರ ಮಾರ್ಗದಲ್ಲಿ ಬರುವ ಹೊನ್ನೇನಹಳ್ಳಿ ರಮಡ ರೆಸಾರ್ಟ್‌ನಲ್ಲಿ ಶಾಸಕರು ವಾಸ್ತವ್ಯ ಹೂಡಲು ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ವಹಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ರಮಡ ರೆಸಾರ್ಟ್ನತ್ತ ಒಬ್ಬೊಬ್ಬರೇ ಬಿಜೆಪಿ ಮುಖಂಡರು ಆಗಮಿಸುತ್ತಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಶಾಸಕ ನಡಹಳ್ಳಿ, ಎಂಎಲ್‌ಸಿ ರವಿಕುಮಾರ್, ಸುರಪುರ ಶಾಸಕ ರಾಜುಗೌಡ, ಈಗಾಗಲೇ ರೆಸಾರ್ಟ್ ತಲುಪಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಎರಡು ಬಸ್ಗಳ ಮೂಲಕ ಇನ್ನುಳಿದ ಬಿಜೆಪಿ ಶಾಸಕರು ರೆಸಾರ್ಟ್ ತಲುಪಲಿದ್ದಾರೆ. ರೆಸಾರ್ಟ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶಾಸಕ ಎಸ್.ಆರ್.ವಿಶ್ವನಾಥ್ ಸ್ಥಳದಲ್ಲೇ ಇದ್ದುಕೊಂಡು, ಯಾವುದೇ ಕುಂದುಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ.