ಬೆಂಗಳೂರು: ಮೂರು ವರ್ಷಗಳ ಹಳೆಯ ಆಸ್ಪತ್ರೆಯ ಮೇಲೆ ಹೊಸ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ಮತ್ತು ಅಧಿಕಾರಿಗಳು ಮುಂದಾಗಿದ್ದು, ಈ ವರದಿಯನ್ನು ಈಟಿವಿ ಭಾರತ ಬಿತ್ತರಿಸಿತ್ತು. ವರದಿಯನ್ನು ನೋಡಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಕಾಮಗಾರಿ ನಿಲ್ಲಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರ 9 ಕೋಟಿ ರೂ. ಬಿಡುಗಡೆ ಮಾಡಿತ್ತು. ಇದರಿಂದ ಆಸ್ಪತ್ರೆ ಕಟ್ಟಲು ಟೆಂಡರ್ ಕೂಡ ಕರೆದು, ಟೆಂಡರ್ ಪಡೆದವರು ಆಸ್ಪತ್ರೆಯನ್ನು ಕಟ್ಟಲು ಮುಂದಾದ್ರು. ಆದ್ರೆ ಅವರು 35 ವರ್ಷದ ಹಳೆಯ ಆಸ್ಪತ್ರೆಯ ಮೇಲೆ ಹೊಸದಾಗಿ ಕಟ್ಟಡ ಕಟ್ಟಲು ಮುಂದಾಗಿದ್ದರು.
ಈಗಾಗಲೇ ಆಸ್ಪತ್ರೆಯ ಮೇಲೆ ನಾಲ್ಕು ಅಡಿಗಳಷ್ಟು ಕಟ್ಟಡವನ್ನು ಕಟ್ಟಲಾಗಿತ್ತು. ಇದರಿಂದ ಆಸ್ಪತ್ರೆ ಕುಸಿಯುವ ಭಿತಿಯಲ್ಲಿತ್ತು. ಇದನ್ನು ಗಮನಿಸಿದ ಈಟಿವಿ ಭಾರತ ವರದಿಯನ್ನು ಮಾಡಿದಲ್ಲದೇ, ಜಿಲ್ಲಾ ಆರೋಗ್ಯಧಿಕಾರಿಗಳ ಗಮನಕ್ಕೆ ತಂದಿತ್ತು. ಈ ವರದಿಯನ್ನು ನೋಡಿದ ಡಿಹೆಚ್ಒ ಕಾಮಗಾರಿ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದು, ಅದನ್ನು ಪರಿಶೀಲಿಸಿದ ಸರ್ಕಾರ ಕಾಮಗಾರಿ ನಿಲ್ಲಿಸುವಂತೆ ಆದೇಶ ನೀಡಿದೆ.
ಹಳೆಯ ಆಸ್ಪತ್ರೆಯ ಮೇಲೆ ಹೊಸ ಕಟ್ಟಡ ನಿರ್ಮಾಣ ಅಷ್ಟೇ ಅಲ್ಲದೆ ಇದೀಗ 35 ವರ್ಷ ಆಗಿರುವ ಹಳೆ ಆಸ್ಪತ್ರೆಯನ್ನು ಒಡೆದು ಅಲ್ಲೇ ಹೊಸ ಆಸ್ಪತ್ರೆಯನ್ನು ಕಟ್ಟಲು ಅನುಮತಿ ನೀಡಿದೆ. ಇದಲ್ಲದೆ ಹಳೆ ಆಸ್ಪತ್ರೆಯನ್ನು ಪಕ್ಕದಲ್ಲೇ ನಿರ್ಮಾಣ ಮಾಡುತ್ತಿರುವ ಮತ್ತೊಂದು ಆಸ್ಪತ್ರೆಯ ಕಟ್ಟಡಕ್ಕೆ ಶಿಪ್ಟ್ ಮಾಡಿದ ಬಳಿಕ ಹೊಸ ಕಟ್ಟಡ ಕಟ್ಟುವಂತೆ ಆದೇಶ ನೀಡಿದೆ.
ಸರ್ಕಾರದ ಈ ಆದೇಶದಿಂದ ಅಪಾಯಕ್ಕೆ ಸಿಲುಕಿದ ಆಸ್ಪತ್ರೆಯನ್ನು ಕಾಪಾಡಿದಂತಾಗಿದೆ. ಪ್ರತಿದಿನ ಸಾವಿರಾರು ಹೊರ ಮತ್ತು ಒಳ ರೋಗಿಗಳು ಈ ಆಸ್ಪತ್ರೆಗೆ ಬರುತ್ತಿದ್ದರು. ಇಂತಹ ಸ್ಥಿತಿಯಲ್ಲಿ ಆಸ್ಪತ್ರೆ ಕುಸಿದು ಬಿದ್ದಿದ್ದರೆ ಸಾವಿರಾರು ಜನರ ಪ್ರಾಣಕ್ಕೆ ಕುತ್ತು ಬರುತ್ತಿತ್ತು. ಇದೀಗ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಕಾಮಗಾರಿಯ ಆರಂಭದಲ್ಲಿ ಗೊತ್ತಾಗಿದ್ದು ಒಳ್ಳೆಯದಾಯ್ತು ಅಂತ ಸಾರ್ವಜನಿಕರು ಹೇಳುತ್ತಾರೆ.