ಬೆಂಗಳೂರು: ರಾತ್ರಿ ಹೊತ್ತು ಮಲಗಲು ಆಶ್ರಯ ಇಲ್ಲದೆ ಬೀದಿಬದಿ ಮಲಗುವ ನಿರಾಶ್ರಿತರಿಗೆ, ಊರು ಬಿಟ್ಟು ನಗರಕ್ಕೆ ಬಂದಿರುವ ಅನಾಥರಿಗೆ, ಹೊರ ರಾಜ್ಯದ ಕಟ್ಟಡ ಕಾರ್ಮಿಕರು ಮೊದಲಾದವರಿಗೆ ರಾತ್ರಿ ವೇಳೆ ಆಶ್ರಯ ನೀಡಲು ಬಿಬಿಎಂಪಿ ನಿರ್ಮಿಸಿಕೊಡುವ ನಿರಾಶ್ರಿತ ಕೇಂದ್ರಗಳ ಸಂಖ್ಯೆ ಹೆಚ್ಚು ಮಾಡಲು ಪಾಲಿಕೆ ನಿರ್ಧರಿಸಿದೆ.
ನಗರದಲ್ಲಿ ಪ್ರಸ್ತುತ ಆರು ನಗರ ನಿರಾಶ್ರಿತ ಕೇಂದ್ರಗಳಿದ್ದು, ಇನ್ನೂರು ಜನ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ವಿಶೇಷ ಆಯುಕ್ತ ರಂದೀಪ್, ಗೂಡ್ ಶೆಡ್ ರಸ್ತೆ, ಮರ್ಫಿಟೌನ್ ಹಾಗೂ ವಿಜಯನಗರದ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ನಡೆಸಿದ ನಂತರ ಮಾತನಾಡಿದ ರಂದೀಪ್, ಕೇಂದ್ರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲಾಗಿದೆ. ಆದ್ರೆ ಕಟ್ಟಡಗಳು ಹಳೆಯದಾಗಿರೋದ್ರಿಂದ ನವೀಕರಣದ ಅಗತ್ಯ. ಹಾಗೇ ಕೆಲ ಬೆಡ್ಗಳು ಹಳೆಯದಾಗಿರೋದ್ರಿಂದ ಬದಲಾಯಿಸಬೇಕಿದೆ. ಆರು ನಿರಾಶ್ರಿತ ಕೇಂದ್ರಗಳನ್ನು ಉತ್ತಮ ಗುಣಮಟ್ಟಕ್ಕೆ ಏರಿಸುವ ಹಾಗೂ ಹತ್ತು ಹೊಸ ನಿರಾಶ್ರಿತ ಕೇಂದ್ರಗಳನ್ನು ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ ಎಂದು ತಿಳಿಸಿದರು.