ಬೆಂಗಳೂರು: ರಾಜ್ಯ ಜೆಡಿಎಸ್ಗೆ ನೂತನ ಸಾರಥಿಯಾಗಿ ಹೆಚ್.ಕೆ. ಕುಮಾರಸ್ವಾಮಿ ಆಯ್ಕೆ ಆಗಿದ್ದು, ಹಿಂದಿನ ಅಧ್ಯಕ್ಷ ಹೆಚ್ ವಿಶ್ವನಾಥ್, ಕುಮಾರಸ್ವಾಮಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಹೆಚ್.ಕೆ. ಕುಮಾರಸ್ವಾಮಿ ಜೆಡಿಎಸ್ನ ಹೊಸ ಸಾರಥಿ.. ಯುವ ಘಟಕಕ್ಕೆ ನಿಖಿಲ್ ಬಾಸ್ - ಮಧು ಬಂಗಾರಪ್ಪ
2019-07-04 13:01:57
ಜೆಡಿಎಸ್ ಯುವ ಘಟಕಕ್ಕೆ ನಿಖಿಲ್ ಸಾರಥಿ
ಇದೇ ವೇಳೆ ಪಕ್ಷದ ಯುವ ಘಟಕದ ಅಧ್ಯಕ್ಷರಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನ ಆಯ್ಕೆ ಮಾಡಲಾಗಿದೆ. ಹಿಂದಿನ ಅಧ್ಯಕ್ಷ ಹೆಚ್ ವಿಶ್ವನಾಥ ಹಾಗೂ ಪಕ್ಷದ ರಾಷ್ಟ್ರೀಯ ವರಿಷ್ಠ ಹೆಚ್.ಡಿ. ದೇವೇಗೌಡ ಅಧ್ಯಕ್ಷ ಹಾಗೂ ಯುವ ಘಟಕದ ಹೆಸರು ಘೋಷಣೆ ಮಾಡಿ, ಶಾಲು ಹೊದಿಸಿ ಅಧಿಕೃತ ಘೋಷಣೆ ಮಾಡಿದರು.
ಈ ಸಂಬಂಧ ಇಂದು ಅವರು ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿಯಲ್ಲೇ ಜಂಟಿ ಸುದ್ದಿಗೋಷ್ಠಿ ನಡೆಸಿ, ಈ ಆಯ್ಕೆಗಳನ್ನ ಘೋಷಣೆ ಮಾಡಿದರು. ಹೆಚ್.ಕೆ. ಕುಮಾರಸ್ವಾಮಿ ಐದು ಬಾರಿ ಶಾಸಕರಾಗಿ ಅನುಭವ ಹೊಂದಿದ್ದು, ಅವರನ್ನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ದೇವೇಗೌಡರು ಸ್ಪಷ್ಟನೆ ನೀಡಿದರು.
ನೂತನ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಸಕಲೇಶಪುರ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಅವರಿಗೆ ಹಾಗೂ ಪಕ್ಷದ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ನಿಖಿಲ್ ಕುಮಾರಸ್ವಾಮಿ ಅವರಿಗೆ ಬಾವುಟ ಹಸ್ತಾಂತರಿಸಿದರು. ಮಧು ಬಂಗಾರಪ್ಪ ಅವನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಬಳಿಕ ಮಾತನಾಡಿದ ಹೆಚ್ ವಿಶ್ವನಾಥ್, ಹೆಚ್.ಕೆ. ಕುಮಾರಸ್ವಾಮಿ ಹಾಗೂ ಮಧು ಬಂಗಾರಪ್ಪ ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದರು.