ನವದೆಹಲಿ: ಮುಂಗಾರು ಹಂಗಾಮಿನಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ಸೇರಿದಂತೆ ಇತರೆ ವಿಷಯಗಳ ಕುರಿತು ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಸಭೆಯಲ್ಲಿ ಕಾವೇರಿ ಕಣಿವೆಯ ಜನತೆಗೆ ಪ್ರಾಧಿಕಾರವು ಬರದ ನಡುವೆ ಶಾಕ್ ನೀಡಿದೆ.
ಕಾವೇರಿ ಕಣಿವೆ ವ್ಯಾಪ್ತಿಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಪ್ರತಿನಿಧಿಗಳು ಭಾಗವಹಿಸಿದ್ದು, ಸಿಡಬ್ಲ್ಯೂಸಿ ಮುಖ್ಯಸ್ಥರಾದ ಮಸೂದ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು.
ದೆಹಲಿಯ ಕಾವೇರಿ ಪ್ರಾಧಿಕಾರದಲ್ಲಿ ನಡೆದ ಸಭೆಯಲ್ಲಿ ತಮಿಳುನಾಡು ಸುಪ್ರೀಂಕೋರ್ಟ್ ಆದೇಶದ ಅನ್ವಯ, ಜೂನ್ ತಿಂಗಳ ತನ್ನ ಪಾಲಿನ 9.19 ಟಿಎಂಸಿ ನೀರು ಬೀಡುವಂತೆ ಪ್ರಸ್ತಾಪಿಸಿತ್ತು. ಎರಡೂ ರಾಜ್ಯಗಳ ವಾದ ಪರಿಗಣಿಸಿ ಜೂನ್ ಪಾಲಿನ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ರಾಜ್ಯದಲ್ಲಿ ಈಗಾಗಲೇ ಬರಗಾಲ ಆವರಿಸಿದ್ದು, ಪ್ರಾಧಿಕಾರದ ಈ ಆದೇಶ ಕಾವೇರಿ ಕಣಿವೆ ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಯಾಕಂದ್ರೇ, ಈಗ ಕೆಆರ್‌ಎಸ್‌ನಲ್ಲಿ ಬರೀ 11.403 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ 7 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯವಾಗಿದೆ. ಒಳ ಹರಿವು 193 ಕ್ಯೂಸೆಕ್ ಹಾಗೂ ಹೊರ ಹರಿವು 348 ಕ್ಯೂಸೆಕ್‌ನಷ್ಟಿದೆ.