ಬೆಂಗಳೂರು:ಸಿಎಲ್ಪಿ ನಾಯಕ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಕೆ ಸಿ ವೇಣುಗೋಪಾಲ್ ನೇತೃತ್ವದಲ್ಲಿ ತಾಜ್ ವಿವಾಂತದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು.
ಅಧಿವೇಶನದಲ್ಲಿ, ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು, ಯಾರೂ ಗೈರು ಹಾಜರಾಗಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ನಾಳೆ ಸುಪ್ರೀಂ ಕೋರ್ಟ್ ತೀರ್ಪು ಬರಲಿದ್ದು, ತೀರ್ಪಿನ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡುವುದರ ಬಗ್ಗೆ ಚರ್ಚಿಸಲಾಗಿದ್ದು, ಹೀಗಾಗಿ ಬುಧವಾರದ ವರೆಗೂ ಶಾಸಕರು ಹೋಟೆಲ್ನಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ.
ರಾಜೀನಾಮೆ ನೀಡಿರುವ ಶಾಸಕ ರಾಮಲಿಂಗಾ ರೆಡ್ಡಿ ಶಾಸಕಾಂಗ ಸಭೆಗೆ ಬಾರದಿದ್ದರೂ ವಿಧಾನಸೌಧ ಅಧಿವೇಶನಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸೌಮ್ಯ ರೆಡ್ಡಿ, ದಿನೇಶ್ ಗುಂಡೂರಾವ್, ಡಿಕೆಶಿ, ಹೆಚ್ ಕೆ ಪಾಟೀಲ್, ಯು ಟಿ ಖಾದರ್ , ಕೆ.ಜೆ. ಜಾರ್ಜ್ ಭಾಗಿಯಾಗಿದ್ದರು.
ಸಚಿವರು-ಕಾರ್ಯಕರ್ತರ ನಡುವೆ ಮಾತಿನ ಚಕಮಕಿ:
ಸಿಎಲ್ಪಿ ಸಭೆ ಮುಗಿಸಿ ಹೊರಬಂದ ಸಚಿವ ಪಿ ಟಿ ಪರಮೇಶ್ವರ್ ನಾಯಕ್ ತಮ್ಮ ಕಾರು ಹತ್ತಿ ಹೊರಡಲು ಸಿದ್ಧವಾದಾಗ ಕಾರ್ಯಕರ್ತರು ತಡೆದು, ಎಲ್ಲರೂ ಬಸ್ನಲ್ಲೇ ಹೋಗಬೇಕೆಂದು ಒತ್ತಾಯಿಸಿದರು. ಆದ್ರೆ ಕೆಲವು ವೈಯಕ್ತಿಕ ಕೆಲಸವಿದ್ದ ಕಾರಣ ಕಾರ್ನಲ್ಲೇ ತೆರಳುವುದಾಗಿ ತಿಳಿಸಿ ಸಚಿವರು ಹೋದರು. ಈ ವೇಳೆ ಹೋಟೆಲ್ ಮುಂದೆ ಗದ್ದಲ, ಗಲಾಟೆ ವಾತಾವರಣ ಸೃಷ್ಟಿಯಾಗಿತ್ತು.