ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮುಸ್ಲಿಂ ಸಮುದಾಯದ ಸಭೆಯಲ್ಲಿ ಮಾತಿನ ಜಟಾಪಟಿ ನಡೆದಿದೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ದೇವೇಗೌಡರು ಕರೆದಿದ್ದ ಮುಸ್ಲಿಂ ಸಮುದಾಯದ ಸಭೆಯಲ್ಲಿ ಚಾಮರಾಜಪೇಟೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಲ್ತಾಫ್ ಖಾನ್ ಭಾಷಣ ಮಾಡುತ್ತಿದ್ದ ವೇಳೆ ವಾಗ್ವಾದ ಉಂಟಾಗಿ, ಕಾರ್ಯಕರ್ತರು ತಿರುಗಿಬಿದ್ದರು.
ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆದದ್ದು ಏನು?
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ನಮ್ಮವರೇ ಕಾಂಗ್ರೆಸ್ಗೆ ಮತ ಹಾಕಿಲ್ಲ. ಹಾಗಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಸೋತರೆಂದು ಅಲ್ತಾಫ್ ಖಾನ್ ಹೇಳುತ್ತಿದ್ದಂತೆ ಆಕ್ರೋಶಗೊಂಡ ಚಾಮರಾಜಪೇಟೆ ಮುಸ್ಲಿಂ ಸಮುದಾಯದ ಕಾರ್ಯಕರ್ತರು, ಭಾಷಣ ನಿಲ್ಲಿಸುವಂತೆ ಜೋರು ಧ್ವನಿಯಲ್ಲಿ ಕೂಗಾಟ ನಡೆಸಿದರು. ಆಗ ಅಲ್ತಾಫ್ಗೆ ಕುಳಿತುಕೊಳ್ಳಲು ವೇದಿಕೆಯಲ್ಲಿದ್ದ ಮುಖಂಡರಿಂದ ಸೂಚನೆ ಬಂತು.
ಎಲ್ಲವನ್ನೂ ಮೌನವಾಗಿ ಕುಳಿತು ದೇವೇಗೌಡರು ಗಮನಿಸುತ್ತಿದ್ದರು. ಕೂಗಾಟ ಹೆಚ್ಚಾಗುತ್ತಿದ್ದಂತೆಯೇ ತಕ್ಷಣವೇ ಮಾಧ್ಯಮದವರನ್ನು ಜೆಡಿಎಸ್ ಮುಖಂಡರು ಹೊರಗೆ ಕಳುಹಿಸಿದರು. ವೇದಿಕೆಯಲ್ಲಿ ಮಧು ಬಂಗಾರಪ್ಪ, ಮಾಜಿ ಸಚಿವ ನಬಿ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಎನ್.ಹೆಚ್.ಕೋನರೆಡ್ಡಿ, ಜಫ್ರುಲ್ಲಾ ಖಾನ್ ಮತ್ತಿತರು ಉಪಸ್ಥಿತರಿದ್ದರು.