ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಸಂಬಂಧ ಎದ್ದಿದ್ದ ಅಸಮಾಧಾನವನ್ನು ಶಮನಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಡೆಗೂ ಯಶಸ್ವಿಯಾಗಿದ್ದು, ಅತೃಪ್ತರನ್ನು ಸಮಾಧಾನಪಡಿಸಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಲು ಒಪ್ಪಿಸಿದ್ದಾರೆ.
ಹೌದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಲೆದೂರಿದ್ದ ಅಸಮಾಧಾನವನ್ನು ಯಡಿಯೂರಪ್ಪ ಶಮನ ಮಾಡಿದ್ದಾರೆ. ತಮ್ಮ ನಿವಾಸಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಅಶ್ವತ್ಥ್ ನಾರಾಯಣ, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ರನ್ನು ಕರೆಸಿ ಮಾತುಕತೆ ನಡೆಸಿದ ಯಡಿಯೂರಪ್ಪ ಸಂಧಾನ ಮಾಡಿದರು. ಯಡಿಯೂರಪ್ಪ ಮಾತಿಗೆ ರುದ್ರೇಶ್ ಸಮ್ಮತಿ ನೀಡಿದರು. ನಂತರ ಬಿಎಸ್ವೈ ಮನೆಯಿಂದ ಒಟ್ಟಿಗೆ ಅಭ್ಯರ್ಥಿ ಅಶ್ವತ್ಥ್ ನಾರಾಯಣ ಹಾಗೂ ರುದ್ರೇಶ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರಚಾರಕ್ಕೆ ತೆರಳಿದರು.
ಸಂಧಾನದ ನಂತರ ಮಾತನಾಡಿದ ರುದ್ರೇಶ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಆಕಾಂಕ್ಷಿಯಾಗಿದ್ದಿದ್ದು ನಿಜ. ಆದರೆ ಬೆಂಗಳೂರು ಗ್ರಾಮಾಂತರದಲ್ಲಿ ಒಕ್ಕಲಿಗರ ಮತಗಳು ಹೆಚ್ಚಿರುವ ಕಾರಣ ನಾನು ಹಿಂದೆ ಸರಿಯುವಂತೆ ಆರ್.ಅಶೋಕ್ ಸೂಚನೆ ನೀಡಿದರು. ಅಶ್ವತ್ಥ್ ನಾರಾಯಣ ಅವ್ರಿಗೆ ಟಿಕೆಟ್ ಕೊಟ್ಟಿರುವುದರಿಂದ ಅಸಮಾಧಾನ ಇಲ್ಲ. ಇದನ್ನು ಹೈಕಮಾಂಡ್ ತೀರ್ಮಾನ ಮಾಡಿದೆ. ಅಶೋಕ್ ಅವರ ನೇತೃತ್ವದಲ್ಲಿ ನಾವು ಚುನಾವಣೆ ಎದುರಿಸಿ ಗೆಲ್ಲಲಿದ್ದೇವೆ. ಈಗ ಚುನಾವಣೆ ಮಾಡುವುದೊಂದೇ ನಮ್ಮ ಗುರಿ ಎಂದರು.
ಅಭ್ಯರ್ಥಿ ಅಶ್ವತ್ಥ್ನಾರಾಯಣ ಮಾತನಾಡಿ, ನಿನ್ನೆ ನಾಮಿನೇಶನ್ ಮಾಡುವಾಗ ಯಡಿಯೂರಪ್ಪನವರು ಇರಲಿಲ್ಲ. ಇವತ್ತು ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ. ಮೂರು ಮುಖ್ಯಮಂತ್ರಿಗಳು ಹಾಗೂ ಒಬ್ಬ ಪ್ರಧಾನಿಯನ್ನು ಕೊಟ್ಟ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಈ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಅದಕ್ಕೆ ಎಲ್ಲರೂ ಒಂದಾಗಿ ಶ್ರಮಿಸುತ್ತೇವೆ. ಚುನಾವಣಾ ಪ್ರಚಾರಕ್ಕೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಮನವಿ ಮಾಡುತ್ತೇವೆ ಎಂದರು.
ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಮಾತನಾಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಲ್ಲಾ ತಾಲೂಕುಗಳ ಉಸ್ತುವಾರಿಯನ್ನು ಬಿಜೆಪಿಯ ಪ್ರಮುಖ ನಾಯಕರಿಗೆ ವಹಿಸಲಾಗಿದೆ. ಆರ್.ಅಶೋಕ್, ರುದ್ರೇಶ್, ತುಳಸಿ ಮುನಿರಾಜು ಹಾಗೂ ಯೋಗೀಶ್ವರ್ಗೂ ಚುನಾವಣಾ ಉಸ್ತುವಾರಿ ವಹಿಸಿದ್ದೇವೆ. ಇನ್ನು ಯಾವ ಅಸಮಾಧಾನವೂ ಇಲ್ಲ. ಎಲ್ಲರೂ ಒಟ್ಟಾಗಿ ಕೂಡಿ ಚುನಾವಣೆ ಎದುರಿಸುತ್ತೇವೆ ಎಂದರು.