ಬೆಂಗಳೂರು: ಸರ್ಕಾರಿ ಇಲಾಖೆಗಳ ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ಬಾರದೆ ಕೇವಲ ಕಡತಗಳಿಗಷ್ಟೇ ಸೀಮಿತವಾಗಿರುತ್ತವೆ ಎಂಬ ಮಾತು ನಿಜ ಅಂತಾ ಅನ್ನಿಸುತ್ತೆ.
ಹೌದು, ರಾಜಧಾನಿಯಲ್ಲಿ ಹಿಂದೆಂದೂ ಕಂಡರಿಯದಂತಹ ಬೇಸಿಗೆ ಇದೆ. ನಗರದ ಹಲವಾರು ಕಡೆ ನೀರಿನ ಅಭಾವವೂ ಕಾಡಿದೆ. ಈ ಹಿನ್ನೆಲೆ ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆ ಆಚರಿಸಿದ ಜಲಮಂಡಳಿ, ನೀರುಳಿಸುವ ಹಾಗೂ ಮರುಬಳಕೆ ಮಾಡುವ ಕುರಿತು ಏಳು ಅಂಶಗಳ ರೂಪುರೇಷೆ ಸಿದ್ಧಪಡಿಸಿತ್ತು. ಆದ್ರೆ ಅವೆಲ್ಲ ಕಡತಗಳಿಗಷ್ಟೇ ಸೀಮಿತವಾಗಿದ್ದು, ಕಾರ್ಯರೂಪಕ್ಕೆ ಬರುವ ಲಕ್ಷಣಗಳೇ ಕಾಣ್ತಿಲ್ಲ. ಬಿಬಿಎಂಪಿಯ ಪಾರ್ಕ್ಗಳಿಗೆ ಬೋರ್ವೆಲ್ ನೀರನ್ನು ಪೂರೈಸಲಾಗ್ತಿದೆ. ಆದ್ರೆ ಅಂತರ್ಜಲವನ್ನು ಉಳಿಸುವ ನಿಟ್ಟಿನಲ್ಲಿ, ಪಾರ್ಕ್ಗಳಿಗೆ ಶುದ್ಧೀಕರಿಸಿದ ತ್ಯಾಜ್ಯ ಘಟಕದ ನೀರನ್ನು ಮರುಬಳಕೆ ಮಾಡಬೇಕೆಂದು ಜಲಮಂಡಳಿ ರೂಪುರೇಷೆ ಸಿದ್ಧಪಡಿಸಿತ್ತು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,419 ಪಾರ್ಕ್ಗಳಿದ್ದು, ಇವುಗಳಲ್ಲಿ 800 ಪಾರ್ಕ್ಗಳ ಗಿಡಮರಗಳಿಗೆ ನೀರು ಹಾಕಲು ಬೋರ್ವೆಲ್ಗಳನ್ನು ಬಳಸಲಾಗ್ತಿದೆ. ಆದ್ರೆ ಬೇಸಿಗೆ ಬಂದಿರೋದ್ರಿಂದ 250 ಬೋರ್ವೆಲ್ಗಳ ನೀರು ಬತ್ತಿ ಹೋಗಿದೆ. ಹೀಗಾಗಿ ಟ್ಯಾಂಕರ್ ನೀರಿನ ಮೂಲಕ ಪಾರ್ಕ್ಗಳಿಗೆ ನೀರಿನ ಸರಬರಾಜು ಮಾಡಲಾಗ್ತಿದೆ ಎಂದು ಪಾಲಿಕೆ ತೋಟಗಾರಿಕೆ ಇಲಾಖೆಯ ಅಧಿಕಾರಿ ಗಂಗಾಧರ್ ತಿಳಿಸಿದ್ದಾರೆ.