ಬೆಂಗಳೂರು :ಮಹಾಘಟಬಂಧನ್ ಜೊತೆ ಗುರುತಿಸಿಕೊಂಡಿರುವ ಎಲ್ಲಾ ಪಕ್ಷಗಳು ಒಗ್ಗಟ್ಟಿನಿಂದಿದ್ದು, ಫಲಿತಾಂಶದ ನಂತರ ಹೊಸ ಸರ್ಕಾರ ರಚಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದರು.
ಪದ್ಮನಾಭನಗರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ರಾಹುಲ್ ಗಾಂಧಿ ಪ್ರಧಾನಿಯಾಗಲು ಜೆಡಿಎಸ್ ಬೆಂಬಲ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣಾ ಫಲಿತಾಂಶ ಬಂದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಎಲೆಕ್ಟ್ರಾನಿಕ್ ಮತಯಂತ್ರಗಳ ದುರ್ಬಳಕೆ ಬಗ್ಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಚುನಾವಣಾ ಆಯೋಗದ ಮುಖ್ಯಸ್ಥ ಕುರೇಶಿ ಸೇರಿದಂತೆ ಹಲವರು ಆಕ್ಷೇಪ ಎತ್ತಿದ್ದಾರೆ. ಹೀಗಾಗಿ ವಿವಿ ಪ್ಯಾಟ್ ಎಣಿಕೆ ಮಾಡುವಂತೆ ಆಗ್ರಹ ಪಡಿಸುತ್ತಿದ್ದೇವೆ ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಇವಿಎಂ ಮಷಿನ್ಗಳನ್ನು ಬದಲಿಸಲಾಗಿದೆ. 2009ರಿಂದ ಇವಿಎಂ ಮಷಿನ್ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನಾವು ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ನಾಳೆ 23 ಪಕ್ಷಗಳು ಜೊತೆ ಸೇರಿ ಚರ್ಚಿಸುತ್ತೇವೆ. ದೇವೆಗೌಡರ ಬಳಿ ಸಲಹೆ ಪಡೆದುಕೊಂಡಿದ್ದೇನೆ ಎಂದರು.