ಬೆಂಗಳೂರು: ಶತಾಯಗತಾಯ ಮೂರು ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ರಣತಂತ್ರ ರೂಪಿಸಿದ್ದಾರೆ.
ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಪ್ರಚಾರ ನಡೆಸಲು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಕರೆಸಲಾಗುತ್ತಿದೆ. ಪಕ್ಷೇತರ ಅಭ್ಯರ್ಥಿ ನಟಿ ಸುಮಲತಾ ಅಂಬರೀಶ್ ಅವರನ್ನು ಮಣಿಸಲು ಚಂದ್ರಬಾಬು ನಾಯ್ಡು ಮೂಲಕ ಪ್ರಚಾರ ನಡೆಸಿ ತೆಲುಗು ಭಾಷಿಕರು ಹಾಗೂ ನಾಯ್ಡು ಸಮುದಾಯದ ಮತ ಸೆಳೆಯುವ ತಂತ್ರವನ್ನು ಗೌಡರು ಹೆಣೆದಿದ್ದಾರೆ ಎನ್ನಲಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಇಂದು ಸಂಜೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜಂಟಿ ಪ್ರಚಾರ ನಡೆಸಲಿದ್ದಾರೆ.
ಪಾಂಡವಪುರ ತಾಲೂಕಿನ ಕ್ರೀಡಾಂಗಣದಲ್ಲಿ ಇಂದು ಸಂಜೆ 5 ಗಂಟೆಗೆ ಬಹಿರಂಗ ಸಮಾವೇಶ ಹಮ್ಮಿಕೊಂಡಿದ್ದು, ಇದರಲ್ಲಿ ಚಂದ್ರಬಾಬು ನಾಯ್ಡು ಭಾಗಿಯಾಗಲಿದ್ದಾರೆ. ಅದೇ ರೀತಿ ಜೆಡಿಎಸ್ ವರಿಷ್ಠ ದೇವೇಗೌಡರು, ಚಿಕ್ಕಮಂಗಳೂರು ಹಾಗೂ ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಮೊಮ್ಮಗನ ಪರ ಪ್ರಚಾರ ನಡೆಸಲಿದ್ದಾರೆ. ಸಿಎಂ ಹೆಚ್ಡಿಕೆ ಮಂಡ್ಯದಲ್ಲೇ ವಾಸ್ತವ್ಯ ಹೂಡಿದ್ದು, ಕೆ.ಆರ್.ನಗರ, ಪಾಂಡವಪುರ, ಬನ್ನೂರಿನಲ್ಲಿ ಇಂದು ಚುನಾವಣಾ ಪ್ರಚಾರ ಮಾಡಲಿದ್ದಾರೆ.
ದೊಡ್ಡಗೌಡರ ಕುಟುಂಬ ಸದಸ್ಯರು ನಿಂತಿರುವ ಹಾಸನ, ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಗೆಲ್ಲಲು ಜೆಡಿಎಸ್ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ತಾತ, ಮೊಮ್ಮಕ್ಕಳು ಗೆಲ್ಲದಿದ್ದರೆ ಮೈತ್ರಿ ಸರ್ಕಾರಕ್ಕೆ ಸಂಚಕಾರ ಬರಬಹುದು. ಜೊತೆಗೆ ಮಂಡ್ಯದಲ್ಲಿ ಮಗ ಸೋತರೆ ಮುಖ್ಯಮಂತ್ರಿಗೆ ಮುಖಭಂಗವಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.