ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಖಾಸಗಿ ಹೋಟೆಲ್ನಲ್ಲಿ ನಡೆಸುತ್ತಿರುವ ಕೈ ಮುಖಂಡರ ಒನ್ ಟು ಒನ್ (ಪ್ರತ್ಯೇಕವಾಗಿ) ಸಮಾಲೋಚನಾ ಸಭೆ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಒಬ್ಬೊಬ್ಬರಾಗಿಯೇ ಸಭೆಯಿಂದ ಹೊರ ಬರುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕಾಂಗ್ರೆಸ್ ಮುಖಂಡ ಹೆಚ್.ಕೆ.ಪಾಟೀಲ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಈಗಾಗಲೇ ಸಭೆ ಮುಗಿಸಿ ತೆರಳಿದ್ದಾರೆ.
ವಿಶೇಷ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳಸಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇರವಾಗಿ ಖಾಸಗಿ ಹೋಟೆಲ್ಗೆ ಆಗಮಿಸಲಿದ್ದಾರೆ. ಬಳಿಕ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಒಂದು ಹಂತದ ಸಭೆ ನಡೆಸಲಿದ್ದಾರೆ. ಸರ್ಕಾರ ಬೀಳುವ ದ್ವಂದ್ವ ಅಭಿಪ್ರಾಯಗಳು ವ್ಯಕ್ತವಾದ ಬೆನ್ನಲ್ಲೇ ಹೈಕಮಾಂಡ್ಗೆ ಕರೆ ಮಾಡಿದ್ದ ವೇಣುಗೋಪಾಲ್, ಎಲ್ಲ ವಿವರವನ್ನು ರಾಷ್ಟ್ರೀಯ ನಾಯಕರಿಗೆ ನೀಡಿದ್ದಾರೆ. ಈ ನಡುವೆ ಸಿಎಂ ಬಂದು ಸಮಾಲೋಚಿಸಿದ ನಂತರ ರಾಜ್ಯ ಸಮ್ಮಿಶ್ರ ಸರ್ಕಾರದ ಮುಂದಿನ ನಡೆ ತಿಳಿದು ಬರಲಿದೆ.
ಸಭೆಗೆ ಬಂದ ಬೈರತಿ ಸುರೇಶ್: ವೇಣುಗೋಪಾಲ್ ಭೇಟಿಗೆ ಆಗಮಿಸಿದ ಶಾಸಕ ಬೈರತಿ ಸುರೇಶ್ ಇದೇ ವೇಳೆ ಮಾತನಾಡಿ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಶಾಸಕರು ರಾಜೀನಾಮೆ ಕೊಡ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಅದರಲ್ಲೂ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಆಶ್ಚರ್ಯ ತಂದಿದೆ. ನನ್ನನ್ನಂತೂ ಬಿಜೆಪಿ ನಾಯಕರು ಸಂಪರ್ಕ ಮಾಡಿಲ್ಲ. ರಾಮಲಿಂಗಾರೆಡ್ಡಿ ಜೊತೆ ಪಕ್ಷದ ಹಿರಿಯ ನಾಯಕರು ಮಾತುಕತೆ ನಡೆಸ್ತಿದ್ದಾರೆ. ಸಿಎಂ ಬದಲಾವಣೆ ವಿಚಾರ ಪಕ್ಷದ ಮಟ್ಟದಲ್ಲಿ ಚರ್ಚೆ ಆಗ್ತಿಲ್ಲ. ಮುಂಬೈಗೆ ಹೋಗುವ ಶಾಸಕರನ್ನು ವಾಪಸ್ ಕರೆತರುವ ಭರವಸೆ ಇದೆ. ಶಾಸಕರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳಿರಬಹುದು. ಅವು ರಾಜೀನಾಮೆಗೆ ಕಾರಣ ಆಗುವಷ್ಟು ದೊಡ್ಡ ಸಮಸ್ಯೆಗಳಲ್ಲ ಎಂದರು.