ಬೆಂಗಳೂರು: ಬೆಂಗಳೂರಿ 3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುವ ಮೌಂಟ್ ಕಾರ್ಮೆಲ್ ಕಾಲೇಜ್ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್, ಬೆಂಗಳೂರು ಉತ್ತರ ಕ್ಷೇತ್ರದ ಮತ ಎಣಿಕೆ ಕೇಂದ್ರ ಸೇಂಟ್ ಜೋಸೆಫ್ ಕಾಲೇಜು ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಮತ ಎಣಿಕೆ ಕೇಂದ್ರ ಜಯನಗರದಲ್ಲಿರುವ ಎಸ್ಎಸ್ಎಂಆರ್ವಿ ಕಾಲೇಜಿನಲ್ಲಿ ಏರ್ಪಾಡು ಮಾಡಿಕೊಳ್ಳಲಾಗಿದೆ. ನೂರು ಮೀಟರ್ ದೂರದಲ್ಲಿಯೇ ವಾಹನಗಳನ್ನು ತಡೆಯಲಾಗುತ್ತದೆ. ಕೊಟ್ಟಿರುವ ಐಡಿ ಕಾರ್ಡ್ಗಳನ್ನು ಕಡ್ಡಾಯವಾಗಿ ತರಬೇಕು. ಗುರುತಿನ ಚೀಟಿ ಇಲ್ಲದೆ ಬರುವಂತಿಲ್ಲ. ಮಾಧ್ಯಮದವರನ್ನು ಹೊರತುಪಡಿಸಿ ಮತ ಎಣಿಕೆ ಸಿಬ್ಬಂದಿ, ಏಜೆಂಟ್ಗಳಾಗಲಿ ಮೊಬೈಲ್ ಹಾಗೂ ಬ್ಯಾಗ್ಗಳನ್ನು ತರುವಂತಿಲ್ಲ. ಸಂಪೂರ್ಣವಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮತ ಎಣಿಕೆ ಕೇಂದ್ರಗಳ ಬಳಿ ಅಗ್ನಿ ಶಾಮಕ ದಳ, ಎರಡು ಆಂಬ್ಯುಲೆನ್ಸ್ , ಎರಡು ಜನರೇಟರ್ ವ್ಯವಸ್ಥೆ ಮಾಡಲಾಗಿದ್ದು, ಮತ ಎಣಿಕೆ ಕೇಂದ್ರ ಹಾಗೂ ಕಾಲೇಜ್ಗಳ ಸುತ್ತಮುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು. ನಾಳೆ ಬೆಳಗ್ಗೆ 5 ಗಂಟೆಗೆ ಕೌಂಟಿಂಗ್ ಸಿಬ್ಬಂದಿ ರಿಪೋರ್ಟ್ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಬೆಳಗ್ಗೆ 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್ ಕೌಂಟಿಂಗ್ ಮಾಡಲಾಗುತ್ತದೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಇವಿಎಂ ಮೆಷಿನ್ನ ಮತಎಣಿಕೆ ಮುಗಿಯುತ್ತದೆ. ನಂತರ 5 ವಿವಿ ಪ್ಯಾಟ್ಗಳ ಕೌಂಟಿಂಗ್ ನಡೆಯುತ್ತದೆ ಎಂದರು.
ಬಿಗಿ ಪೊಲೀಸ್ ಬಂದೋಬಸ್ತ್ :
ಇದೇ ವೇಳೆ ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ಬಂದೋಬಸ್ತ್ ಬಗ್ಗೆ ಪರಿಶೀಲನೆ ನಡೆಸಿದರು. ಸ್ಟ್ರಾಂಗ್ ರೂಂ ಮತ್ತು ಮತ ಎಣಿಕೆ ಕೊಠಡಿಯ ಬಳಿ ಕೇಂದ್ರ ಮೀಸಲು ಪಡೆಯ ಸಿಬ್ಬಂದಿಗಳ ಭದ್ರತೆ ಇರುತ್ತದೆ. 3 ಸಾವಿರ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಬೆಂಗಳೂರಿನಾದ್ಯಂತ ನಾಳೆ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಮದ್ಯಪಾನ ನಿಷೇಧ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಬಳಿ ಯಾರೂ ಅಪಾಯಕಾರಿ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಜನರಿಗೆ ತೊಂದರೆ ಆಗದಂತೆ ಸೆಲೆಬ್ರೆಷನ್ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಬರುವ ಡಿಸಿಪಿಗಳು ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಾರೆ ಎಂದು ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಹೇಳಿದರು.