ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೊರೆಗಳು. ಬಿಜೆಪಿಗೆ ಅವರು ಬಹುಮತ ಕೊಟ್ಟಿದ್ದಾರೆ. ನಾವು ಆತ್ಮಾವಲೋಕನ ಮಾಡಿಕೊಂಡು ಪಕ್ಷ ಕಟ್ಟುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚುನಾವಣಾ ಫಲಿತಾಂಶದ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ ಮೋದಿ ವರ್ಚಸ್ಸು, ಕಾಂಗ್ರೆಸ್ ವೀಕ್ನೆಸ್ ಅಂತ ಮಾತನಾಡಲ್ಲ. ತುಮಕೂರಿನಲ್ಲಿ ಮುದ್ದು ಹನುಮೇಗೌಡರಿಗೆ ಟಿಕೆಟ್ ನೀಡದ ಹಿನ್ನೆಲೆ ಸೋಲು ಕಂಡಿದೆ. ಆದರೆ, ಈಗ ವಿಮರ್ಶೆ ಬೇಡ. ಮೈತ್ರಿಯಂತೆ ತುಮಕೂರು ಬಿಟ್ಡು ಕೊಡಲಾಗಿದೆ. ಹೀಗಾಗಿ ಸೋಲಿನ ಅವಲೋಕನ ಮಾತ್ರ ಮಾಡಲಾಗುತ್ತಿದೆ. ಜನರು ಏನು ತೀರ್ಪು ಕೊಟ್ಟಿದ್ದಾರೋ ಅದನ್ನು ಸ್ವಾಗತಿಸುತ್ತೇನೆ.
ದೇವೇಗೌಡರ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಜನರ ತೀರ್ಪು, ಜೆಡಿಎಸ್ ಒಂದೇ ಗೆದ್ದಿರೋದು, ನಾವು ಎರಡು ಗೆದ್ದಿದ್ದೇವೆ. ಜನರು ನಮ್ಮನ್ನ ತಿರಸ್ಕರಿಸಿ ಬಿಜೆಪಿಯನ್ನು ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನದಲ್ಲಿ ಗೆಲ್ಲಿಸಿದ್ದಾರೆ. ಜನರ ತೀರ್ಪಿಗೆ ನಾವು ತಲೆಬಾಗುತ್ತೇವೆ. ಮಂಡ್ಯ ಹಾಗೂ ತುಮಕೂರಿನಲ್ಲಿ ಸೋಲು ಹೇಗಾಯಿತು ಅನ್ನೊದರ ಬಗ್ಗೆ ಚರ್ಚಿಸಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಬಗ್ಗೆ ವರದಿ ತರಿಸಿಕೊಂಡು ತಪ್ಪುಗಳನ್ನು ತಿದ್ದುಕೊಳ್ಳುತ್ತೇವೆ. ಹೀನಾಯ ಸೋಲಿನ ಕಾರಣ ಹುಡುಕಿ ಮತ್ತೆ ಹೋರಾಟ ನಡೆಸುತ್ತೇವೆ ಎಂದರು.
ಇವಿಎಂ ದೋಷದ ಬಗ್ಗೆ ಪರಿಶೀಲನೆ ನಡೆಯಲಿದೆ. ಮೈತ್ರಿಗೆ ಏನು ಸಮಸ್ಯೆಯಾಗಿಲ್ಲ. ಬಿಎಸ್ವೈ ಹೇಳಿದ್ದು ಇದುವರೆಗೆ ಯಾವುದೂ ಆಗಿಲ್ಲ. ನಮ್ಮ ಸರ್ಕಾರ ಈಗಿನವರೆಗೂ ಸುಭದ್ರವಾಗಿದೆ. ರೆಬೆಲ್ ಶಾಸಕ ರಮೇಶ್ ಜಾರಕಿಹೋಳಿ ಸೇರಿ ಯಾರೂ ಅಸಮಾಧಾನಗೊಂಡಿಲ್ಲ. ಯಾರು ಕಾಂಗ್ರೆಸ್ ಬಿಟ್ಟುಹೋಗಲ್ಲ. ಇಡೀ ದೇಶದ ಜನ ಮೋದಿಯ ನಾಯಕತ್ವ ಬೇಕು ಅಂತ ತೀರ್ಮಾನಿಸಿ ಬಿಜೆಪಿ ಗೆಲ್ಲಿಸಿದ್ದಾರೆ. ಮತ್ತೊಬ್ಬ ರೆಬೆಲ್ ಶಾಸಕ ಸುಧಾಕರ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಸುಧಾಕರ್ ಮನೆಗೆ ರಾಜಕೀಯದ ಬಗ್ಗೆ ಮಾತನಾಡಲು ಹೋಗಿಲ್ಲ. ಅವರು ಊಟಕ್ಕೆ ಕರೆದ ಕಾರಣ ಅವರ ಮನೆಗೆ ಹೋಗಿದ್ದೆ ಎಂದರು.