ಬೆಂಗಳೂರು: ಏಪ್ರಿಲ್ 13 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಭೇಟಿ ಹಿನ್ನೆಲೆ ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರು ಪೂರ್ವ ಸಿದ್ಧತಾ ಸಭೆ ನಡೆಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಎರಡು ಗಂಟೆಗಳ ಕಾಲಸಭೆನಡೆಯಿತು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗಿಯಾಗಿದ್ದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರ ಸಭೆ ಅಂದು ರಾಹುಲ್ ಗಾಂಧಿ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಮಂಡ್ಯ ಕ್ಷೇತ್ರದ ಕೆ.ಆರ್ ನಗರ ವಿಧಾನಸಭಾ ಕ್ಷೇತ್ರ, ಕೋಲಾರ ಹಾಗೂ ಚಿತ್ರದುರ್ಗದಲ್ಲಿ ರಾಹುಲ್ ಪ್ರಚಾರ ಮಾಡಲಿದ್ದು, ಮೂರು ಕಡೆ ಬೃಹತ್ ಸಮಾವೇಶ ಆಯೋಜಿಸಿ ಯಶಸ್ವಿಯಾಗಿಸುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ಮಂಡ್ಯ, ಮೈಸೂರಲ್ಲಿರುವ ರಾಜಕೀಯ ಗೊಂದಲವನ್ನ ಕೂಡಲೇ ಬಗೆಹರಿಸುವ ಕುರಿತು ಕೂಡ ಚರ್ಚೆ ನಡೆದಿದೆ. ಅದರಲ್ಲೂ ಮಂಡ್ಯದಲ್ಲಿ ಪರಿಸ್ಥಿತಿ ಕೈಮೀರಿದ್ದು, ಹೈಕಮಾಂಡ್ ತೀರ್ಮಾನ ಪಾಲನೆಯಾಗ್ತಿಲ್ಲ ಎಂದು ಕೆ.ಸಿ ವೇಣುಗೋಪಾಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಸದ ಹಾಗೂ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಕೂಡ ಸಭೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಈ ಸಾರಿ ಅವರು ಕಣಕ್ಕಿಳಿದಿದ್ದರು ಕೂಡ ಸಾಕಷ್ಟು ತೀವ್ರ ಸ್ಪರ್ಧೆ ಬಿಜೆಪಿಯ ಬಚ್ಚೇಗೌಡರಿಂದ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರ ಭೇಟಿ ಕೂಡ ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯ ಮಾತನಾಡಿ, ಮಂಡ್ಯ ಕೈ ಮುಖಂಡರ ಸಭೆ ಕರೆದಿದ್ದೇನೆ. ಮಾತಾಡ್ತೇನೆ. 12 ರಂದು ಮಂಡ್ಯಕ್ಕೆ ಹೋಗ್ತಿದ್ದೇನೆ. ರಾಜ್ಯದ 28 ಕ್ಷೇತ್ರಗಳ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಇವತ್ತು ಮಂಡ್ಯ ಮುಖಂಡರ ಸಭೆ ಕರೆದಿದ್ದೇನೆ. ಎಲ್ಲವೂ ಬಗೆಹರಿಯುತ್ತೆ, ನೀವೇನು ಗಾಬರಿ ಬೀಳಬೇಡಿ ಎಂದರು.
ದಿನೇಶ ಗುಂಡೂರಾವ್ ಮಾತನಾಡಿ, ರಾಜ್ಯದ ಎಲ್ಲ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಎಲ್ಲೆಲ್ಲಿ ಗೆಲ್ತೇವೆ. ಮತ್ತು ಎಲ್ಲೆಲ್ಲಿ ಇನ್ನೂ ಪ್ರಚಾರ ಜೋರಾಗಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ. ಮೈಸೂರಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲರೂ ಸೇರಿಯೇ ಸುದ್ದಿಗೋಷ್ಠಿ ಮಾಡಿದ್ದಾರೆ. ರಾಹುಲ್ ಭೇಟಿ ಬಗ್ಗೆ ಸಮಾಲೋಚಿಸಿದ್ದೇವೆ. ಏ.13 ಮತ್ತು ನಂತರ ಏ.18 ರಂದು ಮತ್ತೆ ರಾಹುಲ್ ಬರುತ್ತಾರೆ ಎಂದರು.
ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮಾತನಾಡಿ, ಮಂಡ್ಯ, ಮೈಸೂರು, ಹಾಸನದ ಬಗ್ಗೆ ಚರ್ಚೆ ಮಾಡಿದ್ದೇವೆ. ಕೆಲವೊಂದು ಕಡೆ ಸ್ವಲ್ಪ ಸಮಸ್ಯೆಯಿದೆ. ಇವತ್ತು ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ. ಯಾವುದೇ ಭಿನ್ನಾಬಿಪ್ರಾಯ ಪಕ್ಷದಲ್ಲೂ ಇಲ್ಲ. ಎಲ್ಲರೂ ಒಗ್ಗಟ್ಟಾಗಿಯೇ ಕೆಲಸ ಮಾಡ್ತಾರೆ. ಹೆಚ್ಚಿನ ಸೀಟು ರಾಜ್ಯದಲ್ಲಿ ಗೆಲ್ತೇವೆ ಎಂದರು.
ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಹೆಚ್ಡಿಕೆ ದೂರು ವಿಚಾರ ಮಾತನಾಡಿ, ಆ ರೀತಿಯೇನೂ ಅವರು ನನಗೆ ದೂರು ನೀಡಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರು ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಎಲ್ಲರೂ ಒಟ್ಟಾಗಿಯೇ ಪ್ರಚಾರ ಮಾಡ್ತಿದ್ದಾರೆ. ರಾಜ್ಯ ಕೈ ನಾಯಕರ ಬಗ್ಗೆ ಹೆಚ್ಡಿಕೆ ಹೊಗಳಿದ್ದಾರೆ ಎಂದು ಹೇಳಿದರು.
ಸಚಿವ ಡಿ.ಕೆ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂವತ್ತು ವರ್ಷ ಪರಸ್ಪರ ಹೊಡದಾಡಿದ್ದೇವೆ. ಏಕ್ ದಮ್ ಕಾರ್ಯಕರ್ತರು ಒಂದಾಗೋದು ಕಷ್ಟ. ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತೇವೆ. ದೇಶಕ್ಕೋಸ್ಕರ, ಪಕ್ಷಕ್ಕಾಗಿ ಒಂದಾಗುತ್ತೇವೆ. ಎಲ್ಲರಿಗೂ ಸ್ವಾಭಿಮಾನ ಇರುತ್ತೆ. ಹೀಗಾಗಿ ಕೆಲವರು ಮಾತನಾಡುತ್ತಾರೆ. ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ ಎಂದರು.