ಕರ್ನಾಟಕ

karnataka

ETV Bharat / state

ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 50% ರಷ್ಟು ಸೀಟು: ಕಾಯ್ದೆಗೆ ಸರ್ಕಾರ ಒಲವು

ಕೇಂದ್ರ ಸರ್ಕಾರ ವೈದ್ಯಕೀಯ ಕೋರ್ಸುಗಳ ಸೀಟು ಹಂಚಿಕೆಗಾಗಿ ನೀಟ್‌ ಪದ್ಧತಿಯನ್ನು ಜಾರಿಗೆ ತಂದ ನಂತರ ರಾಜ್ಯದ ಬಹುತೇಕ ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಅಂತಹ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿರುವ ಸರ್ಕಾರ, ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಹಂಚಿಕೆಗೆ ಮೀಸಲು ಕಾಯ್ದೆ ತರುವತ್ತ ಹೆಜ್ಜೆ ಇಟ್ಟಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 50% ರಷ್ಟು ಸೀಟು ಮೀಸಲು

By

Published : Jun 5, 2019, 7:36 PM IST

ಬೆಂಗಳೂರು: ನೀಟ್ ಪದ್ಧತಿಯಿಂದಾಗಿ ವೈದ್ಯಕೀಯ ಸೀಟುಗಳು ಸಿಗದೆ ಅವಕಾಶ ವಂಚಿತರಾದ ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶೇ. 50% ರಷ್ಟು ಸೀಟುಗಳನ್ನು ಮೀಸಲಿಡುವ ಸಂಬಂಧ ಪ್ರತ್ಯೇಕ ಕಾಯ್ದೆ ಜಾರಿಗೆ ತರುವ ಮಹತ್ವದ ನಿರ್ಧಾರವನ್ನು ರಾಜ್ಯ ಮೈತ್ರಿ ಸರ್ಕಾರ ಕೈಗೊಂಡಿದೆ.

ಈ ಕಾಯ್ದೆಯನ್ನು ರೂಪಿಸುವ ಕುರಿತು ಚರ್ಚಿಸಲು ಮತ್ತು ಅಭಿಪ್ರಾಯ ಕೇಳಲು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ನೇತೃತ್ವದಲ್ಲಿ ನಾಳೆ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಮಹತ್ವದ ಸಭೆ ನಡೆಯಲಿದೆ. ಕೇಂದ್ರ ಸರ್ಕಾರ ವೈದ್ಯಕೀಯ ಕೋರ್ಸುಗಳ ಸೀಟು ಹಂಚಿಕೆಗಾಗಿ ನೀಟ್‌ ಪದ್ಧತಿಯನ್ನು ಜಾರಿಗೆ ತಂದ ನಂತರ ರಾಜ್ಯದ ಬಹುತೇಕ ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಅಂಥ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿರುವ ಸರ್ಕಾರ, ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಹಂಚಿಕೆಗೆ ಮೀಸಲು ಕಾಯ್ದೆ ತರುವತ್ತಾ ಹೆಜ್ಜೆ ಇಟ್ಟಿದೆ ಎಂದು ಸರ್ಕಾರದ ಉನ್ನತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

ಉದ್ದೇಶಿತ ಕಾಯ್ದೆ ಏನು ಹೇಳುತ್ತೆ?

ಖಾಸಗಿ ಮೆಡಿಕಲ್‌ ಕಾಲೇಜುಗಳು, ಧಾರ್ಮಿಕ ಅಲ್ಪಸಂಖ್ಯಾತ ಮೆಡಿಕಲ್‌ ಕಾಲೇಜುಗಳು, ಭಾಷಾ ಅಲ್ಪಸಂಖ್ಯಾತ ಮೆಡಿಕಲ್‌ ಕಾಲೇಜುಗಳು ಹಾಗೂ ಸ್ವಾಯತ್ತ ಮೆಡಿಕಲ್‌ ಕಾಲೇಜುಗಳಲ್ಲಿ ಶೇ. 50 ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು ಎಂಬುದು ನೂತನ ಕಾಯ್ದೆಯ ಸಾರಾಂಶ.

ನೀಟ್‌ನಿಂದ ಆಗ್ತಿರುವ ಸಮಸ್ಯೆ ಏನು?
ವೈದ್ಯಕೀಯ ಕೋರ್ಸುಗಳ ಸೀಟುಗಳ ಹಂಚಿಕೆಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ನೀಟ್‌ ಪದ್ಧತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಮೆಡಿಕಲ್‌ ವ್ಯಾಸಂಗ ಮಾಡುವುದು ಕಷ್ಟವಾಗುತ್ತಿದೆ. ಈ ಮುಂಚೆ ಸಿಇಟಿ ಪರೀಕ್ಷೆಯ ಮೂಲಕ ಗಣನೀಯ ಸಂಖ್ಯೆಯಲ್ಲಿ ಮೆಡಿಕಲ್‌ ಸೀಟು ಪಡೆಯುತ್ತಿದ್ದ ರಾಜ್ಯದ ವಿದ್ಯಾರ್ಥಿಗಳೀಗ ನೀಟ್‌ ಪದ್ಧತಿಯಿಂದ ಸಮಸ್ಯೆಗೆ ಒಳಗಾಗಿದ್ದಾರೆ.

ನೀಟ್‌ ಪದ್ಧತಿಯಿಂದ ರಾಜ್ಯದಲ್ಲಿ ಸೀಟು ಪಡೆಯುವವರ ಪರ ರಾಜ್ಯಗಳ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬಂದರೆ, ಹೊರರಾಜ್ಯಗಳಲ್ಲಿ ಸೀಟು ಪಡೆಯಲು ರಾಜ್ಯದ ವಿದ್ಯಾರ್ಥಿಗಳು ಅಲ್ಲಿಗೆ ಹೋಗಲು ಬಯಸುತ್ತಿಲ್ಲ. ಹೀಗಾಗಿ ಗಣನೀಯ ಪ್ರಮಾಣದ ವಿದ್ಯಾರ್ಥಿಗಳು ಮೆಡಿಕಲ್‌ ಬದಲು ಪರ್ಯಾಯ ಕೋರ್ಸುಗಳನ್ನು ಪಡೆಯುತ್ತಿದ್ದಾರೆ. ಇದರ ಪರಿಣಾಮವಾಗಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆಗಳಿಂದ ಹಿಡಿದು ಖಾಸಗಿ ಆಸ್ಪತ್ರೆಗಳ ತನಕ ಪರ ರಾಜ್ಯಗಳ ವೈದ್ಯರುಗಳು ಇರುತ್ತಾರೆಯೇ ಹೊರತು ರಾಜ್ಯದ ವೈದ್ಯರು ಇರುವುದಿಲ್ಲ. ಈ ಆತಂಕಕಾರಿ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿರುವ ಖಾಸಗಿ ಮೆಡಿಕಲ್‌ ಕಾಲೇಜುಗಳು, ಧಾರ್ಮಿಕ, ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು ಹಾಗೂ ಸ್ವಾಯತ್ತ ಕಾಲೇಜುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಸೀಟುಗಳನ್ನು ಒದಗಿಸುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ.

ಈ ಮಧ್ಯೆ ಕೆಲ ಶಿಕ್ಷಣ ಸಂಸ್ಥೆಗಳ ಪೈಕಿ ಬಹುತೇಕ ಶಿಕ್ಷಣ ಸಂಸ್ಥೆಗಳು ಹಣದ ಆಸೆಗಾಗಿ ಪರ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟುಗಳನ್ನು ಒದಗಿಸುತ್ತಿದ್ದು, ರಾಜ್ಯದ ಭೂಮಿ, ನೀರು, ವಿದ್ಯುತ್‌ ಮತ್ತಿತರ ಸವಲತ್ತು ಪಡೆದು ಪರ ರಾಜ್ಯದವರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರಕ್ಕೆ ಇರಿಸು ಮುರಿಸುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿಯೇ ಕೇಂದ್ರದ ನೀಟ್‌ ಪದ್ಧತಿಯಿಂದ ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಲು ಈ ನಾಲ್ಕು ಬಗೆಯ ಮೆಡಿಕಲ್‌ ಕಾಲೇಜುಗಳ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರ್ಕಾರ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿದೆ. ಅದೇ ರೀತಿ ನಾಳೆ ಈ ನಾಲ್ಕೂ ಬಗೆಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಜತೆ ಮಾತುಕತೆ ನಡೆಸಲು ಸರ್ಕಾರ ಮುಂದಾಗಿದ್ದು, ತದ ನಂತರ ವಿಧಾನಮಂಡಲ ಅಧಿವೇಶನದಲ್ಲಿ ನೂತನ ಮಸೂದೆಯನ್ನು ಜಾರಿಗೆ ತರಲಿದೆ. ಒಂದು ವೇಳೆ ವಿಧಾನ ಮಂಡಲ ಅಧಿವೇಶನಕ್ಕೂ ಮುನ್ನ ಈ ವಿಷಯದಲ್ಲಿ ಕಾರ್ಯ ಪ್ರವೃತ್ತವಾಗಬೇಕಾದ ಅನಿವಾರ್ಯತೆ ಬಂದರೆ ಅಧಿಕೃತ ಸರ್ಕಾರಿ ಆದೇಶವನ್ನೇ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

For All Latest Updates

TAGGED:

Meeting

ABOUT THE AUTHOR

...view details