ಬೆಂಗಳೂರು : ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಬಡವರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಶೇಕಡ 10% ಮೀಸಲಾತಿ ನೀತಿ ರಾಜ್ಯದಲ್ಲಿ ಅನ್ವಯವಾಗುವುದಿಲ್ಲ.
ಪ್ರತಿಶತ ಹತ್ತರ ಮೀಸಲಾತಿ ನೀತಿಯು ಕೇಂದ್ರ ಸರ್ಕಾರದ ಹುದ್ದೆಗಳು ಹಾಗು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ರಾಜ್ಯ ಸರಕಾರದ ವ್ಯಾಪ್ತಿಯ ಇಲಾಖೆಗಳ ಹುದ್ದೆಗಳು ಮತ್ತು ರಾಜ್ಯದ ಅಧೀನದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧ ಪಡುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಷಷ್ಟಪಡಿಸಿದೆ.
ಕೇಂದ್ರದ ಶೇಕಡ ಹತ್ತರ ಹೊಸ ಮೀಸಲಾತಿ ನೀತಿ ಪ್ರಕಾರ ರಾಜ್ಯ ಸರ್ಕಾರಿ ನೌಕರಿಗಳ ಭರ್ತಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ವೇಳೆ ಪಾಲಿಸಲಾಗುವುದಿಲ್ಲವೆಂದು ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೊಹ್ಮದ್ ಮೊಹಸೀನ್ ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವ್ಯಾಪ್ತಿಯ ಹುದ್ದೆಗಳು ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಆದಾಯ ಮತ್ತು ಆಸ್ತಿ ಪ್ರಮಾಣ ಪತ್ರವನ್ನು ಮಾತ್ರ ನೀಡುತ್ತದೆ. ಇದಿಷ್ಟಕ್ಕೆ ಅನ್ವಯವಾಗುವಂತೆ ಮಾತ್ರ ಆದೇಶ ಹೊರಡಿಸಲಾಗಿದೆ. ಆದರೆ ರಾಜ್ಯ ಸರ್ಕಾರದ ಇಲಾಖೆಗಳ ಹುದ್ದೆ ತುಂಬುವಾಗ, ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಕೇಂದ್ರ ಶೇ.10 ರಷ್ಟು ಆರ್ಥಿಕ ಹಿಂದುಳಿದವರ ಮೀಸಲಾತಿಗೆ ಸಂಬಂಧಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರವು ಇಲ್ಲಿಯವರೆಗೆ ಕೇಂದ್ರದ ಹೊಸ ಮೀಸಲಾತಿ ನೀತಿ ಜಾರಿಗೆ ತರುವ ಸಂಬಂಧ ಯಾವುದೇ ತೀರ್ಮಾನ ತಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟ ಇಲಾಖೆ ಸೂಕ್ತ ನಿರ್ಧಾರ ತಗೆದುಕೊಳ್ಳಲಿದೆ. ಅಲ್ಲಿಯ ತನಕ ಕೇಂದ್ರದ ಎನ್ಡಿಎ ಸರ್ಕಾರ ಫೆಬ್ರವರಿಯಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿರುವ ಮೀಸಲಾತಿ ನಿಯಮ ರಾಜ್ಯದಲ್ಲಿ ಅನುಷ್ಟಾನಕ್ಕೆ ಬಂದಿರುವುದಿಲ್ಲ ಎಂದು ಮೊಹಸೀನ್ ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನ ಮೇಲ್ವರ್ಗದಲ್ಲಿನ ಬಡವರಿಗೆ ಸಹಾಯವಾಗುವಂತೆ ಸರ್ಕಾರಿ ಹುದ್ದೆಗಳು ಮತ್ತು ವಿದ್ಯಾರ್ಥಿಗಳ ಪ್ರವೇಶ ಸಂದರ್ಭದಲ್ಲಿ ಶೇ. ಹತ್ತರಷ್ಟು ಸೀಟುಗಳನ್ನು ಮೀಸಲಿಡುವಂತೆ ಕಾಯ್ದೆಯನ್ನು ಜಾರಿಗೆ ತಂದು ಮೇಲ್ವರ್ಗದ ಮತ ಬ್ಯಾಂಕ್ಗೆ ಕೈ ಹಾಕಿದ್ದರು.