ಬಸವಕಲ್ಯಾಣ(ಬೀದರ್):ಜೀವನದಲ್ಲಿ ನಾನೊಂದು ಮಾಡಬಾರದ ತಪ್ಪು ಮಾಡಿದ್ದೇನೆ, ಹೀಗಾಗಿ ನನ್ನನ್ನು ನೀವೆಲ್ಲರೂ ಕ್ಷಮಿಸಿ ಎಂದು ವಾಟ್ಸ್ಆ್ಯಪ್ ಮೂಲಕ ಪಾಲಕರಿಗೆ ಸಂದೇಶ ರವಾನಿಸಿ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾಲ್ಕಿ ತಾಲೂಕಿನ ಕಾಸರತೂಗಾಂವ ಗ್ರಾಮದ ಅವಿನಾಶ್ ರಾಜಕುಮಾರ್ ಪಾಟೀಲ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ.
ಈತ ಆಗಸ್ಟ್ 4ರಂದು ಬಸವಕಲ್ಯಾಣ ನಗರದಲ್ಲಿ ನನ್ನ ಸ್ನೇಹಿತರ ಮದುವೆ ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದ. ಬಸವಕಲ್ಯಾಣದ ಲಾಡ್ಜ್ವೊಂದರಲ್ಲಿ 3 ದಿನಗಳ ಕಾಲ ಉಳಿದುಕೊಂಡು, ಆ. 7ರಂದು ಲಾಡ್ಜ್ನಿಂದ ನಾಪತ್ತೆಯಾಗಿದ್ದ. ಅಂದು ಮನೆಯವರಿಗೆ ವಾಟ್ಸ್ಆ್ಯಪ್ ಮೂಲಕ ಜೀವನದಲ್ಲಿ ನಾನೊಂದು ಮಾಡಬಾರದ ತಪ್ಪು ಮಾಡಿದ್ದೇನೆ, ನಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿಬಿಡಿ ಎಂದು ಸಂದೇಶ ಕಳಿಸಿದ್ದಾನೆ. ಅದೇ ದಿನ ನಗರಕ್ಕೆ ಹೊಂದಿಕೊಂಡಿರುವ ತ್ರಿಪುರಾಂತ ಕೆರೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.