ಬಸವಕಲ್ಯಾಣ: ತಾಪಂ ಇಓ ಸೇರಿದಂತೆ ಕಚೇರಿ ಅಧಿಕಾರಿಗಳು ನಮಗೆ ಗೌರವವೇ ಕೊಡುತ್ತಿಲ್ಲ. ಜನ ಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾದರೆ ಜನರ ಮಧ್ಯೆ ನಾವು ಹೇಗೆ ಕೆಲಸ ಮಾಡಬೇಕು? ನಮ್ಮ ಮಾತಿಗೆ ಇಲ್ಲಿ ಬೆಲೆ ಇಲ್ಲ ಅಂದರೆ ಹೇಗೆ? ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳ ವರ್ತನೆಯಿಂದ ಬೇಸರವಾಗುತ್ತಿದೆ. ಅವರನ್ನಾದರೂ ಕೆಲಸದಿಂದ ವಜಾಗೊಳಿಸಿ, ಇಲ್ಲವಾದಲ್ಲಿ ನನ್ನನ್ನಾದರೂ ಮನೆಗೆ ಕಳಿಸಿ. ಇದನ್ನು ಸರಿಪಡಿಸದಿದ್ದಲ್ಲಿ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಸಭೆಯಲ್ಲಿದ್ದ ಶಾಸಕರ ಮುಂದೆ ಅಸಹಾಯಕತೆ ತೋರ್ಪಡಿಸಿದರು.
ನಂತರ ಮಾತು ಮುಂದುವರೆಸಿದ ಅವರು, ನಾನೊಬ್ಬ ಲಂಬಾಣಿ ಮಹಿಳೆಯಾಗಿದ್ದೇನೆ ಎನ್ನುವ ಕಾರಣಕ್ಕೆ ನನಗೆ ಗೌರವ ನೀಡುತ್ತಿಲ್ಲ. ಕಚೇರಿಗೆ ಬಂದರೆ ನನ್ನ ಜೊತೆ ಅಧಿಕಾರಿಗಳು ಯಾರು ಮಾತನಾಡಲ್ಲ. ತಾಲೂಕಿನಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳು ಸೇರಿದಂತೆ ತಾಲೂಕು ಪಂಚಾಯ್ತಿಯಲ್ಲಿ ನಡೆಯುವ ಕಾರ್ಯಚಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.