ಬೀದರ್: ಕಳೆದ ಮೂರು ತಿಂಗಳಿನಿಂದ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ ಎಂದು ಮಹಿಳೆಯರು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲೂಕಿನ ಯರಂಡಗಿಯಲ್ಲಿ ನಡೆಯಿತು.
ನೀರಿಗಾಗಿ ಮಹಿಳೆಯರಿಂದ ಗ್ರಾಪಂಗೆ ಮುತ್ತಿಗೆ: ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ - ಮಹಿಳೆ
ಕಳೆದ ಮೂರು ತಿಂಗಳಿನಿಂದ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ ಎಂದು ಮಹಿಳೆಯರು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲೂಕಿನ ಯರಂಡಗಿಯಲ್ಲಿ ನಡೆಯಿತು.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯರಂಡಗಿ ಗ್ರಾಮದಲ್ಲಿ ಮೂರು ತಿಂಗಳಿನಿಂದ ಸಮರ್ಪಕ ಕುಡಿಯಲು ನೀರು ಹಾಗೂ ದಿನಬಳಕೆ ನೀರು ಸಿಗುತ್ತಿಲ್ಲವೆಂದು ರೊಚ್ಚಿಗೆದ್ದ ಮಹಿಳೆಯರು, ಖಾಲಿ ಕೊಡಗಳನ್ನು ತೆಗೆದುಕೊಂಡು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ನಾವು ಅದೇಷ್ಟೋ ಬಾರಿ ಇಲ್ಲಿನ ಗ್ರಾಮ ಪಂಚಾಯತ್ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರಿಗೆ ಮನವಿ ಮಾಡಿಕೊಂಡರೂ ಅವರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೆ ಅವರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸ್ಥಳಕ್ಕೆ ಬಂದ ಪಿಡಿಒರನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸರ್ಕಾರ ನೀರಿಗಾಗಿ ಯಾವುದೇ ರೀತಿಯ ಹಣದ ಕೊರತೆ ಇಲ್ಲ ಎಂದು ಪದೇ ಪದೇ ಹೇಳುತ್ತಲೇ ಬಂದಿದೆ. ಆದರೆ ನಮಗೆ ಕುಡಿಯಲು ನೀರೇ ಸಿಗದಂತಾಗಿದೆ. ಗ್ರಾಮದಲ್ಲಿ ಇದ್ದ ತೆರೆದ ಬಾವಿ ಸಂಪೂರ್ಣ ಬತ್ತಿ ಹೋಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸದಾಗಿ 8 ಬೋರ್ವೆಲ್ ಕೊರೆದರೂ ಅದರಲ್ಲಿ ಸಹ ನೀರಿಲ್ಲ. ಹೀಗಾಗಿ ನೀರಿಗಾಗಿ ಏನಾದರು ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಸ್ಥಳದಲ್ಲಿದ್ದ ಪಿಡಿಒ ಶಿವಪುತ್ರ ಮಾತನಾಡಿ, ಈಗಾಗಲೇ ಮೇಲಾಧಿಕಾರಿಗಳ ಜೊತೆ ದೂರವಾಣಿ ಮುಖಾಂತರ ಮಾತನಾಡಿದ್ದು, ಕೊಂಚ ನೀರು ಇರುವ ಕಡೆ ಮೋಟಾರ್ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ಅಲ್ಲದೆ ಟ್ಯಾಂಕರ್ ಮುಖಾಂತರ ನೀರನ್ನು ಸರಬರಾಜು ಮಾಡಲು ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ನಮ್ಮ ಕೆಲಸಕ್ಕೆ ಅಡ್ಡಿಪಡಿಸದೆ ಕೆಲಸ ಮಾಡಲು ಬಿಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಇನ್ನು ನಾಲ್ಕು ದಿನದೊಳಗಾಗಿ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂದಕ್ಕೆ ಪಡೆದರು.