ಬಸವಕಲ್ಯಾಣ: ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸುತ್ತಿಲ್ಲ. ಬಸವಕಲ್ಯಾಣದಲ್ಲಿ ಮಾತ್ರ ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಜೆಡಿಎಸ್ ಅಭ್ಯರ್ಥಿ ಸೈಯದ್ ಯಾಶ್ರಬ್ ಖಾದ್ರಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವಿಗಾಗಿ ಸಂಪೂರ್ಣ ಶ್ರಮ ವಹಿಸಲಾಗುವುದು ಎಂದರು.
ಉಪಚುನಾವಣೆಯಲ್ಲಿ ಮೂರು ಕಡೆಗಳಲ್ಲಿ ಸ್ಫರ್ಧಿಸುವುದು ಕಷ್ಟ. ಆಡಳಿತಾರೂಢ ಬಿಜೆಪಿ ಬಳಿ ಹಣ ಇದೆ. ಸಾಕಷ್ಟು ಲೂಟಿ ಮಾಡಿದ ಹಣ ಬಿಜೆಪಿ ಬಳಿ ಇದ್ದು, ಚುನಾವಣೆಯಲ್ಲಿ ಖರ್ಚು ಮಾಡಲಿದೆ. ಆ ಪಕ್ಷದ ಜೊತೆ ಸ್ಪರ್ಧೆ ಮಾಡುವುದು ಅಸಾಧ್ಯ. ಮೂರು ಕಡೆಗಳಲ್ಲಿ ಸ್ಪರ್ಧಿಸಿ ಸಾಮರ್ಥ್ಯ ವ್ಯರ್ಥ ಮಾಡುವುದಕ್ಕಿಂತ ಸಂಘಟನೆಯಿದ್ದ ಕ್ಷೇತ್ರದಲ್ಲಿ ಪ್ರಯತ್ನ ಪಟ್ಟರೆ ಅಭ್ಯರ್ಥಿ ಗೆಲ್ಲಬಹುದು. ಈ ನಿಟ್ಟಿನಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ ಎಂದರು.
ಬಸವಕಲ್ಯಾಣ ಕ್ಷೇತ್ರದಲ್ಲಿ ಹಿಂದೆ 7 ಬಾರಿ ಜನತಾಪರಿವಾರದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ತಾವು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅಭಿವೃದ್ದಿ ವಿಷಯ ಆಧಾರದ ಮೇಲೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ ಮತ ಯಾಚಿಸಲಾಗುವುದು ಎಂದರು.
ಬಿಜೆಪಿ ಟಿಕೆಟ್ ಮಾರಾಟ:
ಬಿಜೆಪಿ ಪಕ್ಷದಿಂದ ಬಸವಕಲ್ಯಾಣ ಕ್ಷೇತ್ರದ ಅಭ್ಯರ್ಥಿ ಟಿಕೆಟ್ ಮಾರಿಕೊಂಡಿದ್ದಾರೆ ಎನ್ನುವ ಬಗ್ಗೆ ಆ ಪಕ್ಷದ ಮುಖಂಡರೆ ಮಾತಾಡಿಕೊಳ್ಳುತ್ತಿ ದ್ದಾರೆ. ಬಿಜೆಪಿಯಲ್ಲಿ ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೇ ನಿದರ್ಶನವಾಗಿದೆ. ಚುನಾವಣೆ ವೇಳೆ 15 ದಿನಗಳ ಕಾಲ ಕ್ಷೇತ್ರದಲ್ಲಿಯೇ ಉಳಿದು ಹಿಂದೆ ಕಲಬುರಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿದ ಮಾದರಿಯಲ್ಲಿಯೇ ಇಲ್ಲಿಯೂ ಕೂಡ ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದರು.
ಸಿಡಿ ಲೇಡಿಗೆ ರಕ್ಷಣೆ ನೀಡಲಿ:
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಸರ್ಕಾರ ರಕ್ಷಣೆ ನೀಡಬೇಕು. ಸಿಡಿ ಯುವತಿ 2ನೇ ವಿಡಿಯೋ ಬಿಡುಗಡೆ ಮಾಡಿದ್ದು, ರಕ್ಷಣೆ ಕೋರಿದ್ದಾಳೆ. ಹೀಗಾಗಿ ಅವಳಿಗೆ ಸೂಕ್ತ ರಕ್ಷಣೆ ನೀಡಬೇಕಾದದ್ದು ಸರ್ಕಾರದ ಜವಾಬ್ದಾರಿ ಎಂದರು.