ಬಸವಕಲ್ಯಾಣ (ಬೀದರ್):ಮದ್ಯದ ಅಮಲಿನಲ್ಲಿ ಪತ್ನಿಗೆ ಕಿರುಕುಳ ನೀಡುತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದಿದೆ.
ಎಣ್ಣೆ ಏಟಲ್ಲಿ ನಿತ್ಯ ಹೆಂಡತಿಗೆ ಕಿರುಕುಳ: ಮಕ್ಕಳೊಂದಿಗೆ ಸೇರಿ ಅಳಿಯನನ್ನು ಕೊಂದ ಮಾವ - ಮದ್ಯ ವ್ಯಸನಿ ಪತಿಯನ್ನು ಥಳಿಸಿ ಕೊಂದ ಪತ್ನಿ
ಮದ್ಯ ವ್ಯಸನಿಯಾಗಿದ್ದ ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ ತನ್ನ ತಂದೆ ಹಾಗೂ ಸಹೋದರರ ಜೊತೆ ಸೇರಿ ಹತ್ಯೆ ಮಾಡಿದ್ದಾರೆ.
ಭರತ ದತ್ತು ಇಲ್ಲಾಳೆ(38) ಕೊಲೆಯಾದ ವ್ಯಕ್ತಿ. ಮದ್ಯ ವ್ಯಸನಿಯಾಗಿದ್ದ ಈತ ಕುಡಿದ ಅಮಲಿನಲ್ಲಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆ ತನ್ನ ತಂದೆ ಹಾಗೂ ಸಹೋದರರ ಜೊತೆ ಸೇರಿ ಸೋಮವಾರ ಸಂಜೆ ವ್ಯಕ್ತಿಗೆ ಮನಬಂದಂತೆ ಥಳಿಸಿದ್ದಾರೆ. ಥಳಿತದಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಪ್ರಾಣ ಬಿಟ್ಟಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮಂಠಾಳ ಠಾಣೆ ಸಿಪಿಐ ಮಹೇಶ ಗೌಡ ಪಾಟೀಲ, ಪಿಎಸ್ಐ ಜಯಶ್ರೀ ನೇತೃತ್ವದ ಪೊಲೀಸರ ತಂಡ, 5 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಎಸ್ಪಿ ಡಾ. ಗೋಪಾಲ ಬ್ಯಾಕೋಡ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.