ಬಸವಕಲ್ಯಾಣ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದೇ ಬಿಜೆಪಿಯರ ಕಾಯಕವಾಗಿದೆ. ಜನರು ಇದರಿಂದ ಜಾಗೃತರಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ನಗರದ ಸಾಹಿಲ್ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ಸಾಮಾಜಿಕ ನ್ಯಾಯದಡಿ ವಿಶ್ವಕ್ಕೆ ಪ್ರಥಮ ಬಾರಿಗೆ ಸಂಸತ್ತು ಪರಿಕಲ್ಪನೆ ನೀಡಿದ ಶರಣರ ಕಾಯಕ ಭೂಮಿ ಬಸವಕಲ್ಯಾಣ. ಈ ನೆಲದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದಿಂದ ಯೋಜನೆ ರೂಪಿಸಲಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಅನುಭವ ಮಂಟಪಕ್ಕೆ 5 ಕೋಟಿ ರೂ. ಘೋಷಣೆ ಮಾಡಿ, ನೂರು ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಮುಖ್ಯಮಂತ್ರಿಗಳು ಇಲ್ಲಿಗೆ ಬಂದು ಅನುಭವ ಮಂಟಪದ ಭೂಮಿ ಪೂಜೆ ಸಹ ಮುಗಿಸಿ ಹೋಗಿದ್ದಾರೆ. ಆದರೆ ಭೂಮಿ ಪೂಜೆ ನಡೆಸಿ ಎರಡು ತಿಂಗಳು ಕಳೆದರೂ ಅನುಭವ ಮಂಟಪಕ್ಕೆ ಇದುವರೆಗೂ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ಕೂಡ ನಡೆದಿಲ್ಲ. ಜಿಲ್ಲೆಯ ವಸತಿ ಯೋಜನೆ ಮತ್ತು ನೀರಾವರಿ ಯೋಜನೆಗಳಿಗೆ ಒಂದೇ ಒಂದು ರೂ. ಅನುದಾನ ಕಲ್ಪಿಸಿಲ್ಲ. ಉಪ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗರು ಜನರಿಗೆ ಮರಳು ಮಾಡಲು ಹೊರಟಿದ್ದಾರೆ. ಭಾನುವಾರ ನಗರಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರು ಜನರ ಮುಂದೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಖಂಡ್ರೆ ಹೇಳಿದರು.