ಬಸವಕಲ್ಯಾಣ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ಇಲ್ಲಿನ ಮಿನಿ ವಿಧಾನಸೌಧದ ಬಳಿ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಧರಣಿ ಈ ವೇಳೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಮುಜಾಹಿದ್ ಪಾಶ ಖುರೇಶಿ ಮಾತನಾಡಿ, ಆರ್ಎಸ್ಎಸ್ನವರು ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ದೇಶದಲ್ಲಿ ಆರ್ಥಿಕ ಸಮಸ್ಯೆ, ಬಡತನ, ನಿರುದ್ಯೋಗ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದರ ಕುರಿತು ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಸಂವಿಧಾನ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೆಲ್ಫೇರ್ ಪಾರ್ಟಿ ಆಪ್ ಇಂಡಿಯಾದ ಕಲಬುರಗಿ ವಿಭಾಗೀಯ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರನ್ನು ಹಿಂದು ವಿರೋಧಿಗಳು, ಮೋದಿ ವಿರೋಧಿಸುವವರನ್ನು ದೇಶ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ. ಪ್ರತಿಭಟನೆ ಮಾಡುವವರ ವಿರುದ್ಧ ದೌರ್ಜನ್ಯ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ಈ ಕಾಯ್ದೆಯನ್ನು ರದ್ದುಗೊಳಿಸದಿದ್ದರೆ ಸಂವಿಧಾನಕ್ಕೆ ಧಕ್ಕೆಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಜನರಿಗೆ ವಾಸ್ತವದ ಅರಿವು ಮೂಡಿಸಬೇಕಿದೆ ಎಂದರು.
ಈ ವೇಳೆ ಅಜೀಜ್ ಜಾಗಿರ್ದಾರ್, ವೆಲ್ಫೇರ್ ಪಾರ್ಟಿ ಪ್ರಮುಖರಾದ ಬಿಲಾಲ್ ಅಹ್ಮದ್, ಮೊಹಮ್ಮದ್ ಅರ್ಫಾತ್, ಸಮಿ, ಪರ್ವೆಸ್ ಕರಿಗಾರ್, ಶಾಣಪ್ಪ, ಖಲೀಲ್ ಅಹ್ಮದ್, ಅಬ್ದುಲ್ ಮಾಜಿದ್ ಸೇರಿದಂತೆ ಪ್ರಮುಖರು, ಅನೇಕ ಕಾರ್ಯಕರ್ತರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.