ಬೀದರ್: ಶರಣರ ಕರ್ಮ ಭೂಮಿ ಬಸವಕಲ್ಯಾಣದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ನ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಅದ್ಧೂರಿಯಾಗಿ ನಿನ್ನೆ ಚಾಲನೆ ನೀಡಲಾಯಿತು. ಬಸವಕಲ್ಯಾಣ ಹಾಗೂ ಭಾಲ್ಕಿಯಲ್ಲಿ ನಡೆದ ಯಾತ್ರೆಗೆ ಜನ ಸಾಗರವೇ ಹರಿದು ಬಂದಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಜಂಟಿ ನೇತೃತ್ವದಲ್ಲಿ ಮೊದಲ ಹಂತದ ಪ್ರಜಾಧ್ವನಿ ಯಾತ್ರೆ ಯಶಸ್ವಿಯಾಗಿ ಮುಗಿಸಿರುವ ಕಾಂಗ್ರೆಸ್ ಇದೀಗ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಯನ್ನು ಇಬ್ಬರು ನಾಯಕರು ಪ್ರತ್ಯೇಕವಾಗಿ ಆರಂಭಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬಸವ ಕಲ್ಯಾಣದಲ್ಲಿ ಚಾಲನೆ ಪಡೆದಿರುವ ಪ್ರಜಾಧ್ವನಿ ಯಾತ್ರೆಯು ಉತ್ತರ ಕರ್ನಾಟಕದ 112 ಕ್ಷೇತ್ರದಲ್ಲಿ ಸಂಚರಿಸಿ ಮಾ. 12 ರಂದು ಸಮಾರೋಪಗೊಳ್ಳಲಿದೆ. ದಕ್ಷಿಣ ಕರ್ನಾಟಕದಲ್ಲಿ ಡಿ ಕೆ ಶಿವಕುಮಾರ ನೇತೃತ್ವದಲ್ಲಿ 112 ಕ್ಷೇತ್ರಗಳಲ್ಲಿ ಯಾತ್ರೆ ನಡೆಯಲಿದೆ. ಇನ್ನೂ ಬೀದರ್ ಜಿಲ್ಲೆಯಲ್ಲಿ ಎರಡು ದಿನ ಪ್ರಜಾಧ್ವನಿ ಯಾತ್ರೆ ಸಂಚರಿಸಲಿದೆ. ಜಿಲ್ಲೆಯ ಆರು ಕ್ಷೇತ್ರದ ಪೈಕಿ ಐದು ಕಡೆ ಬಹಿರಂಗ ಸಭೆ ಆಯೋಜಿಸಲಾಗಿದೆ.
ಇಲ್ಲಿನ ಐತಿಹಾಸಿಕ ಅನುಭವ ಮಂಟಪಕ್ಕೆ ಭೇಟಿ ನೀಡಿ ದರ್ಶನ ಪಡೆದ ಸಿದ್ದರಾಮಯ್ಯ ಅವರು, ನಗರದ ವಿವಿಧ ವೃತ್ತಗಳಲ್ಲಿ ಮಹಾತ್ಮರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಸವೇಶ್ವರ ಮಂದಿರಕ್ಕೆ ತೆರಳಿ ದರ್ಶನ ಪಡೆದರು. ಇಲ್ಲಿನ ಥೇರ ಮೈದಾನದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆ ಹಾಗೂ ಭಾಲ್ಕಿಯಲ್ಲಿ ನಡೆದ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಅನುಭವ ಮಂಟಪ ಪುನರ್ನಿರ್ಮಾಣ ಮಾಡಬೇಕು ಎಂದು ಸಮಿತಿ ರಚನೆ ಮಾಡಿದ್ದೆ. ಅವರು ವರದಿ ಕೊಟ್ಟಿದ್ದರು. ಅಷ್ಟೊತ್ತಿಗೆ ಚುನಾವಣೆ ಬಂತು ಅದನ್ನು ಪ್ರಾರಂಭ ಮಾಡಲು ಸಾಧ್ಯವಾಗಲಿಲ್ಲ. ಈಗ ಪ್ರಾರಂಭ ಮಾಡಿದ್ದಾರೆ. ಬಹಳ ಸಂತೋಷ. ಆದರೆ ಕೆಲಸ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಅನುಭವ ಮಂಟಪದ ಪುನರ್ನಿರ್ಮಾಣ ಕೆಲಸಗಳಿಗೆ ವೇಗ ಕೊಟ್ಟು, ಆದಷ್ಟು ಬೇಗ ಉದ್ಘಾಟನೆ ಮಾಡುತ್ತೇವೆ. ಈ ಕೆಲಸವನ್ನು ನಮ್ಮ ಪಕ್ಷ ಅಧಿಕಾರಕ್ಕೆ ಬಂದು ನಾವೇ ಮಾಡುತ್ತೇವೆ ಎನ್ನುವ ವಿಶ್ವಾಸ ಇದೆ ನಮಗೆ ಎಂದರು.