ಬೀದರ್: ಹನಿ ನೀರು ನಿಲ್ಲದೆ ಮೂಲೆಗುಂಪಾಗಿದ್ದ ಜಿಲ್ಲೆಯ ಬಾಂದಾರು ಬ್ಯಾರೇಜ್ಗಳು ಇದೀಗ ಭರ್ತಿಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬಯಲು ಸೀಮೆಯ ಬಾಂದಾರು ಬ್ಯಾರೇಜ್ಗಳಲ್ಲಿ ನೀರು ಸಂಗ್ರಹ: ಈಶ್ವರ್ ಖಂಡ್ರೆ ಸಂತಸ - Water storage in Bandar Bridge come barrages
ಭಾಲ್ಕಿ ತಾಲೂಕಿನ ರೈತರಿಗೆ ಅನುಕೂಲವಾಗಲಿ ಎಂದು 2006ರಲ್ಲಿ ಸುಮಾರು 426 ಕೋಟಿ ರೂ. ಖರ್ಚು ಮಾಡಿ ರಾಜ್ಯ ಸರ್ಕಾರ ಮಾಂಜ್ರಾ ನದಿಯ ನಾಲ್ಕು ಕಡೆ ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಿತ್ತು. ಆದರೆ ಬ್ಯಾರೇಜ್ ನಿರ್ಮಾಣವಾದಾಗಿನಿಂದ ಗೇಟ್ಗಳಲ್ಲಿ ಬಿರುಕು ಕಂಡು ಹನಿ ನೀರು ಕೂಡಾ ಈ ಬ್ಯಾರೇಜ್ಗಳಲ್ಲಿ ಸಂಗ್ರಹವಾಗಿರಲಿಲ್ಲ.

ಈ ಬಗ್ಗೆ ಸ್ಥಳೀಯ ಶಾಸಕ ಈಶ್ವರ್ ಖಂಡ್ರೆ ಮಾತನಾಡಿ, ನಮ್ಮ ತಂದೆಯವರು ಶಾಸಕರಾಗಿದ್ದಾಗ ಈ ಭಾಗದ ರೈತರಿಗೆ ಅನುಕೂಲವಾಗಲೆಂದು ನಾಲ್ಕು ಬ್ಯಾರೇಜ್‌ಗಳನ್ನು ಮಂಜೂರು ಮಾಡಲಾಗಿತ್ತು. ಅದರ ಕಾಮಗಾರಿ ಮುಗಿದು 2013ರಲ್ಲಿ ನಾನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಉದ್ಘಾಟನೆ ಮಾಡಿಸಿದ್ದೆ. 2015-16ರಲ್ಲಿ ಬ್ಯಾರೇಜ್ಗಳಿಗೆ ನೀರು ಬಂದಿರಲಿಲ್ಲ. ಬಳಿಕ ನೀರು ಬಂದರೂ ಗೇಟ್ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದು ನೀರು ಸಂಗ್ರಹವಾಗಿರಲಿಲ್ಲ. ಈ ಬಗ್ಗೆ ನಾನು ಮುತುವರ್ಜಿ ವಹಿಸಿ ಗೇಟ್ ದುರಸ್ಥಿಪಡಿಸುವ ಕಾರ್ಯ ಮಾಡಿಸಿದ್ದೇನೆ. ಇದರಿಂದಾಗಿ ಈಗ ಬ್ಯಾರೇಜ್ಗಳು ತುಂಬಿದ್ದು ಈ ಭಾಗದ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
2006ರಲ್ಲಿ ಸುಮಾರು 426 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ಚೆಂದಾಪೂರ್, ಮಾಣಿಕೇಶ್ವರಿ, ಜಿರಗ್ಯಾಳ ಗಡಿ ಭಾಗದ ರೈತರಿಗೆ ಅನುಕೂಲವಾಗಲಿ ಎಂದು ಕೃಷ್ಣ ಭಾಗ್ಯ ಜಲ ನಿಗಮದ ವತಿಯಿಂದ ಮಾಂಜ್ರಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ಕಟ್ಟಲಾಗಿತ್ತು. ಪ್ರತಿಯೊಂದು ಬ್ಯಾರೇಜಿಗೆ 58 ರಿಂದ 60 ಆಟೋಮ್ಯಾಟಿಕ್ ಗೇಟ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಒಂದೇ ಮಳೆಗೆ ಈ ಗೇಟ್‌ಗಳ ಹಣೆಬರಹ ಬಯಲಿಗೆ ಬಂದಿತ್ತು. ಕಳಪೆ ಕಾಮಗಾರಿ ನಡೆಸಿ ಗೇಟ್ ಅಳವಡಿಸಿದ್ದರೂ ಹನಿ ನೀರು ಕೂಡಾ ನಿಲ್ಲದೆ ಹರಿದು ಹೋಗಿತ್ತು. ಈ ಬಗ್ಗೆ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಗೇಟ್ ಬದಲಾವಣೆ ಮಾಡಿ ನೀರು ನಿಲ್ಲಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಗೇಟ್‌ಗಳ ದುರಸ್ಥಿ ಬಳಿಕ ಇದೀಗ ಬ್ಯಾರೇಜ್ಗಳಲ್ಲಿ ನೀರು ಸಂಗ್ರಹವಾಗಿದ್ದು, ಇದರಿಂದ ಭಾಲ್ಕಿ ತಾಲೂಕಿನ 25 ಹಳ್ಳಿಯ ರೈತರಿಗೆ ಬರದಲ್ಲೂ ನೀರು ಸಿಗಲಿದೆ.