ಕರ್ನಾಟಕ

karnataka

ETV Bharat / state

Warli art: ಪೊಲೀಸ್ ಕರ್ತವ್ಯಗಳ ಜಾಗೃತಿ ಚಿತ್ರ.. ಎಸ್‍ಪಿ ಚನ್ನಬಸವಣ್ಣ ಪರಿಕಲ್ಪನೆಗೆ ಜೀವ ತುಂಬಿದ ವರ್ಲಿ ಚಿತ್ರ ಕಲಾವಿದರು - ವರ್ಲಿ ಚಿತ್ರ ಕಲಾವಿದರು

ಬೀದರ್​ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಗೋಡೆಗಳಲ್ಲಿ ಪೊಲೀಸರು ಮಾಡುವ ಸೇವೆ ಹಾಗೂ ಜನರು ಪಾಲಿಸಬೇಕಾದ ನಿಯಮಗಳು ವರ್ಲಿ ಕಲೆಯಲ್ಲಿ ಅರಳಿ ನಿಂತಿವೆ.

ವರ್ಲಿ ಕಲೆ
ವರ್ಲಿ ಕಲೆ

By

Published : Jul 31, 2023, 7:32 PM IST

ಪೊಲೀಸ್ ಕರ್ತವ್ಯಗಳ ಜಾಗೃತಿ ಚಿತ್ರ

ಬೀದರ್​ : ಜನರ ದೂರು-ದುಮ್ಮಾನಗಳಿಗೆ ಕಿವಿಯಾಗುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಗೋಡೆಗಳಲ್ಲಿ ಈಗ ಭಾರತದ ಪುರಾತನ ಕಲೆಗಳಲ್ಲಿ ಒಂದಾದ`ವರ್ಲಿ ಕಲೆ’ ಅಲಂಕರಿಸಿದೆ. ಪೊಲೀಸರ ಕಾರ್ಯ ವೈಖರಿಯನ್ನು ಬಿಂಬಿಸುವ ಕಲಾ ಚಿತ್ತಾರಗಳು ಕಚೇರಿಯ ಅಂದ ಹೆಚ್ಚಿಸಿದ್ದಲ್ಲದೇ ಜನರನ್ನು ಆಕರ್ಷಿಸುತ್ತಿದೆ.

ದಕ್ಷ ಮತ್ತು ಖಡಕ್ ಅಧಿಕಾರಿ ಎಸ್‍ಪಿ ಚನ್ನಬಸವಣ್ಣ ಲಂಗೋಟಿ ಅವರ ಪರಿಕಲ್ಪನೆಗೆ ಕಲಾವಿದರು ಗೆರೆಗಳ ಮೂಲಕ ಜೀವ ತುಂಬಿದ್ದಾರೆ. ತಮ್ಮ ಆಡಳಿತ ವೈಖರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯನ್ನು ಜನಸ್ನೇಹಿ ಯಾಗಿಸಿರುವ ಚನ್ನಬಸವಣ್ಣ ಇದೀಗ, ವರ್ಲಿ ಕಲೆ ಅರಳಿಸಿ ಪೊಲೀಸ್ ಕರ್ತವ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಕಚೇರಿಯಲ್ಲಿ ಸುಂದರ ವಾತಾವರಣ ನಿರ್ಮಿಸುವ ಪ್ರಯತ್ನ ಮಾಡಿದ್ದಾರೆ.

ಬೀದರ್​ ಉತ್ಸವದ ನೆನಪಿನಲ್ಲಿ ನಗರದ ಸರ್ಕಾರಿ ಕಚೇರಿಗಳ ಕಾಂಪೌಂಡ್‍ಗಳ ಮೇಲೆ ನಗರಸಭೆಯಿಂದ ಜಾನಪದ ಕಲೆಗಳನ್ನು ಬಿಂಬಿಸುವ ವರ್ಲಿ ಕಲೆಯನ್ನು ಅರಳಿಸಲಾಗಿತ್ತು. ಇದನ್ನು ಗಮನಿಸಿ ಮನಸೋತ ಎಸ್‍ಪಿ ಚನ್ನಬಸವಣ್ಣ ಅವರಿಗೆ, ಕಲಾ ಚಿತ್ತಾರಗಳ ಮೂಲಕ ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಐಡಿಯಾ ಹೊಳೆದಿತ್ತು. ಅವರ ಕಲ್ಪನೆಯಿಂದಾಗಿ ಇಂದು ಕಚೇರಿಯ ಅಂದವೇ ಬದಲಾಗಿದೆ.

ಪೊಲೀಸ್ ಇಲಾಖೆಯ ಕರ್ತವ್ಯ, ವಿವಿಧ ವಿಭಾಗಗಳ ಕಾರ್ಯ ವೈಖರಿ ಹಾಗೂ ಸಂಚಾರ ನಿಯಮಗಳ ಬಗ್ಗೆ ಚನ್ನಬಸವಣ್ಣ ವಿವರಣೆ ನೀಡಿದ್ದು, ಅದಕ್ಕೆ ಕಲಾವಿದರು ಮೊದಲು ಕಲಾ ಕೃತಿಗಳ ಸ್ಕೆಚ್‍ಗಳನ್ನು ರಚಿಸಿ ಅದಕ್ಕೆ ಸೆಮಿ ರಿಯಲೆಸ್ಟಿಕ್ ವರ್ಲಿ ಕಲೆಯಲ್ಲಿ ಅರಳಿಸಿದ್ದಾರೆ. ಜಿಲ್ಲೆಯ ಖ್ಯಾತ ಕಲಾವಿದ ದಿನೇಶ ವಾನಖೇಡೆ ನೇತೃತ್ವದಲ್ಲಿ ಓಂಕಾರ, ಸಂಜೀವ, ಚಂದ್ರಕಾಂತ ಮತ್ತು ಅಮ್ಜದ್ ಖಾನ್ ಅವರು ವರ್ಲಿ ಕಲೆಯನ್ನು ರಚಿಸಿದ್ದಾರೆ.

ಜನರು ಪಾಲಿಸಬೇಕಾದ ನಿಯಮ ವರ್ಲಿ ಕಲೆಯಲ್ಲಿ: ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎರಡು ಮಹಡಿಯ ಗೋಡೆಗಳಲ್ಲಿ ಬೆರಳಚ್ಚು ಮುದ್ರಣ ಶೋಧನಾ ಘಟಕ, ಇ- ಆಡಳಿತ, 112 ಅಪದ್ಭಾವಂದವ, ಪೊಲೀಸ್ ಕಂಟ್ರೋಲ್ ರೂಂ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ವೈಜ್ಞಾನಿಕ ತನಿಖಾ ಘಟನೆ, ಅಪರಾಧಗಳ ನಿಯಂತ್ರಣ- ಪತ್ತೆ ಮತ್ತು ಸ್ವತ್ತು ಹಿಂದುರಿಗಿಸುವಿಕೆ, ಸೈಬರ್ ಅಪರಾಧಗಳ ತನಿಖೆ, ಸಿಸಿಟಿವಿ ಕಣ್ಗಾವಲು ವ್ಯವಸ್ಥೆ, ಕಾನೂನು ಸುವ್ಯವಸ್ಥೆ, ವಿವಿಐಪಿ ಭದ್ರತೆ, ಶಾಂತಿ ಸೌಹಾರ್ದತೆ ಸಭೆ ಮತ್ತು ಹೊಸ ಬೀಟ್ ಪದ್ಧತಿ ಜಾರಿ ಹೀಗೆ ಖಾಕಿ ಪಡೆ ಮಾಡುವ ಸೇವೆ ಮತ್ತು ಜನರು ಪಾಲಿಸಬೇಕಾದ ನಿಯಮಗಳು ವರ್ಲಿ ಕಲೆಯಲ್ಲಿ ಅರಳಿ ನಿಂತಿವೆ.

ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕರುಗಳಾದ ಡಾ. ಡಿ. ಬಿ ಗುರುಪ್ರಸಾದ ಮತ್ತು ರಾಘವೇಂದ್ರ ಔರಾದಕರ್ ಅವರು ಕಚೇರಿಯಲ್ಲಿ ವರ್ಲಿ ಕಲೆಯನ್ನು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯಲ್ಲಿ ಈ ಮಾದರಿಯಲ್ಲಿ ವರ್ಲಿ ಕಲೆ ಅರಳಿಸಿ ಜಾಗೃತಿ ಮೂಡಿಸುವ ಚಿಂತನೆ ಎಸ್‍ಪಿ ಚನ್ನಬಸವಣ್ಣ ಅವರದ್ದು.

ಕಚೇರಿಯ ಅಂದ ಹೆಚ್ಚುವಂತೆ ಮಾಡಿದ್ದಾರೆ:'ಬೀದರ ನಗರದ ಸರ್ಕಾರಿ ಕಚೇರಿ ಗೋಡೆಗಳ ಮೇಲೆ ವರ್ಲಿ ಕಲೆಯನ್ನು ಗಮನಿಸಿದ್ದೆ. ಈ ಕಲೆಯ ಮೂಲಕ ಪೊಲೀಸರ ಕರ್ತವ್ಯ ಮತ್ತು ನಿಯಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಹೊಳೆಯಿತು. ಕಲಾವಿದರ ತಂಡ ಜನರಿಗೆ ಮನ ಮುಟ್ಟುವಂತೆ ಕಲಾ ಚಿತ್ತಾರಗಳನ್ನು ಅರಳಿಸಿದ್ದು, ಕಚೇರಿಯ ಅಂದ ಹೆಚ್ಚುವಂತೆ ಮಾಡಿದ್ದಾರೆ' ಎಂದು ಎಸ್‍ಪಿ ಚನ್ನಬಸವಣ್ಣ ಅವರು ತಿಳಿಸಿದ್ದಾರೆ.

ಬೀದರ ಜಿಲ್ಲೆಯ ಹಲವೆಡೆ ವರ್ಲಿ ಕಲೆಗಳನ್ನು ರಚಿಸಿದ್ದೇವೆ. ಆದರೆ, ಎಸ್‍ಪಿ ಕಚೇರಿಯಲ್ಲಿನ ಕೆಲಸ ಹೊಸ ಅನುಭವ ನೀಡಿದೆ. ಪೊಲೀಸ್ ವ್ಯವಸ್ಥೆ ಮತ್ತು ಕರ್ತವ್ಯಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳ ಪರಿಕಲ್ಪನೆಗೆ ನಾವು ಕಲೆ ಮೂಲಕ ಜೀವ ತುಂಬಿದ್ದೇವೆ. ಐದು ಜನರ ತಂಡ ಒಂದು ವಾರದಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಿದ್ದು, ಖುಷಿ ಕೊಟ್ಟಿದೆ ಎಂದು ಕಲಾವಿದರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಚಿತ್ರಕಲಾ ಪರಿಷತ್ ಪ್ರಖ್ಯಾತಿ ರಾಷ್ಟ್ರಮಟ್ಟದಲ್ಲೂ ಬೆಳಗಲಿ : ಸಿಎಂ ಬಸವರಾಜ ಬೊಮ್ಮಾಯಿ

ABOUT THE AUTHOR

...view details