ಬೀದರ್:ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಸಾವಿನ ಸಂಖ್ಯೆ ಅರ್ಧ ಶತಕ ಬಾರಿಸಿ ರೆಡ್ ಝೋನ್ ಆದ ಜಿಲ್ಲೆಯಲ್ಲಿ ಜನರು ಕೊರೊನಾ ಭೀತಿ ಮರೆತು ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಆತಂಕವುಂಟು ಮಾಡಿದೆ.
ಜಿಲ್ಲೆಯ ಔರಾದ್ ಮಾರುಕಟ್ಟೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಜಾರಿಗೆ ತಂದ ಪರಿಷ್ಕೃತ ನಿಷೇಧಾಜ್ಞೆ ಸಾಮೂಹಿಕವಾಗಿ ಉಲ್ಲಂಘನೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಜನರು ಮುಖಕ್ಕೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರವನ್ನು ಉಲ್ಲಂಘಿಸಿ ರಸ್ತೆಯಲ್ಲಿ ಗುಂಪು ಸೇರುತ್ತಿದ್ದಾರೆ.
ಅಲ್ಲದೆ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಮಾಡುವ ವರ್ತಕರು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳದೆ ಎಂದಿನಂತೆ ಸಾಮಾನ್ಯವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಣುತ್ತಿಲ್ಲ. ಬಹುತೇಕ ಗ್ರಾಹಕರು ಮುಖಕ್ಕೆ ಮಾಸ್ಕ್ ಹಾಕಿಲ್ಲ. ಅಷ್ಟೇ ಅಲ್ಲದೆ ಅಂಗಡಿ ಮಾಲೀಕರು ಕೂಡ ಮುಖಕ್ಕೆ ಮಾಸ್ಕ್ ಹಾಕದೆ ನಿರ್ಲಕ್ಷ್ಯ ತೋರುತ್ತಿರುವುದು ಮತ್ತಷ್ಟು ಭೀತಿಗೆ ಕಾರಣವಾಗಿದೆ.
ಕಳೆದ ಎರಡು ವಾರಗಳಲ್ಲಿ ಔರಾದ್ ಪಟ್ಟಣದಲ್ಲಿಯೇ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಮಾಡುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದ್ದರೂ ಯಾರೊಬ್ಬರು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಸೋಂಕು ಹರಡುವ ಭೀತಿ ಕಾಡುತ್ತಿದೆ.
ನೆರೆಯ ಮಾಹಾರಾಷ್ಟ್ರದಿಂದ ಅತಿ ಹೆಚ್ಚು ಜನ ವಾಪಸಾಗಿದ್ದಾರೆ. ಅವರೆಲ್ಲರಲ್ಲಿ ಬಹುತೇಕರು ಮಾರುಕಟ್ಟೆಗಳತ್ತ ಬರ್ತಿದ್ದಾರೆ. ಕ್ವಾರಂಟೈನ್ ಮಾಡಬೇಕಾದವರು ಬೇಕಾಬಿಟ್ಟಿಯಾಗಿ ರಸ್ತೆಗೆ ಬರ್ತಿದ್ದಾರೆ. ಇದರಿಂದ ಕೊವಿಡ್-19 ವೈರಾಣು ಸೋಂಕು ಹರಡುವ ಸಾಧ್ಯತೆಗಳಿದ್ದು, ಸ್ಥಳೀಯ ತಾಲೂಕು ಆಡಳಿತ ಇದನ್ನು ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.