ಬೀದರ್: ಶಾಸಕ ಬಿ.ನಾರಾಯಣರಾವ್ ನಿಧನಕ್ಕೆ ವಿಧಾನ ಪರಿಷತ್ ಸದಸ್ಯರು ಸಂತಾಪ ಸೂಚಿಸಿದ್ದು, ಅಗಲಿದ ನಾಯಕನ ಆತ್ಮಶಾಂತಿಗಾಗಿ ಪ್ರಾರ್ಥಿಸಿದ್ದಾರೆ.
ಶಾಸಕ ಬಿ.ನಾರಾಯಣರಾವ್ ಅವರು ನನ್ನ ಬಾಲ್ಯದ ಗೆಳೆಯ. ಅವರು ಹುಟ್ಟಿದ್ದು ಬಸವಂತಪೂರ್ ಗ್ರಾಮವಾದರೂ ಬೆಳೆದಿದ್ದೆಲ್ಲ ಮಲ್ಕಾಪೂರೆ ಗ್ರಾಮದಲ್ಲೇ ನಮ್ಮೊಂದಿಗೆ ಅಣ್ಣನಾಗಿದ್ದ ಅವರು ಅಗಲಿರುವ ಸುದ್ದಿ ಕೇಳಿ ಆಘಾತವಾಗಿದೆ ಎಂದು ಪರಿಷತ್ ಸದಸ್ಯ ರಘುನಾಥ್ ಮಲ್ಕಾಪೂರೆ ನೋವು ತೋಡಿಕೊಂಡಿದ್ದಾರೆ. ಜೆಪಿ ಚಳವಳಿಯಿಂದ ಜನತಾದಳದ ಮೂಲಕ ಮಾಳೆಗಾಂವ್ ಜಿಲ್ಲಾ ಪರಿಷತ್ ಸದಸ್ಯರಾಗಿ ಸಾಕಷ್ಟು ಕಷ್ಟದ ರಾಜಕಾರಣ ಮಾಡುತ್ತ ಸುದಿರ್ಘ 40 ವರ್ಷಗಳ ಕಾಲ ಜನ ಸೇವೆ ಮಾಡುತ್ತ ಇದೀಗ ಬಸವಕಲ್ಯಾಣ ಶಾಸಕರಾಗಿ ಆಯ್ಕೆಯಾಗಿದ್ದರು. ಯಾವುದೇ ದುಶ್ಚಟಗಳಿಲ್ಲದೇ ಸರಳ, ಸಜ್ಜನಿಕೆ ಅಳವಡಿಸಿಕೊಂಡ ಮುತ್ಸದ್ದಿ ರಾಜಕಾರಣಿ ಕಳೆದುಕೊಂಡು ಜಿಲ್ಲೆಗೆ ತುಂಬಲಾರದ ನಷ್ಟವಾಗಿದ್ದು ದೇವರು ಅವರ ಅಗಲಿಕೆ ದುಃಖ ಭರಿಸುವ ಶಕ್ತಿ ಅವರ ಕುಟುಂಬಸ್ಥರು, ಬೆಂಬಲಿಗರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಲ್ಕಾಪೂರೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಹಿಂದ ಅನುಯಾಯಿ ಕಳೆದುಕೊಂಡೆವು:
ಸರಳತೆ ಹಾಗೂ ನೇರ ನುಡಿಯಿಂದಲೇ ಜನಪ್ರೀಯತೆ ಗಳಿಸಿದ್ದ ಬಿ.ನಾರಾಯಣರಾವ್ ಅವರ ನಿಧನ ತುಂಬಲಾರದ ನಷ್ಟವಾಗಿದ್ದು ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಪ್ರಾರ್ಥನೆ ಮಾಡಿದ್ದಾರೆ.