ಬೀದರ್: ಕೋವಿಡ್-19 ಪತ್ತೆ ಹಚ್ಚುವಲ್ಲಿ ಲ್ಯಾಬ್ಗಳ ಪಾತ್ರ ಪ್ರಮುಖವಾಗಿದ್ದು, ಪಶುವೈದ್ಯಕೀಯ ಕಾಲೇಜಿನಲ್ಲಿ ಲಭ್ಯವಿದ್ದ ಆರ್ಟಿ-ಪಿಸಿಆರ್ ಉಪಕರಣಗಳನ್ನು ಆರೋಗ್ಯ ಇಲಾಖೆಯ ಲ್ಯಾಬ್ಗಳಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದಲ್ಲಿ ಕೊವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ರೋಗ ಪತ್ತೆ ಹಚ್ಚುವಲ್ಲಿ ಬಳಸಲಾಗುವ ಆರ್ಟಿ ಪಿಸಿಆರ್ ಉಪಕರಣಗಳು ಪಶುಸಂಗೋಪನೆ ಇಲಾಖೆಯ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಲ್ಯಾಬ್ಗಳಲ್ಲಿ ಲಭ್ಯವಿದ್ದು, ಉಪಕರಣಗಳನ್ನು ಸಹ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಆರೋಗ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಸದ್ಯ ಈ ಉಪಕರಣಗಳನ್ನು ಕೊವಿಡ್-19 ಪತ್ತೆಗೆ ಬಳಸಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಸೋಂಕು ಪತ್ತೆಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.