ಬಸವಕಲ್ಯಾಣ :ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಮನೆ ಮೇಲೆ ಕೆಲವು ಕಿಡಿಗೇಡಿಗಳು ದಾಂಧಲೆ ನಡೆಸಿರುವುದು ಖಂಡನೀಯ. ಕೂಡಲೇ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ತಾಲೂಕು ಅಸ್ಪೃಶ್ಯ ಜಾತಿ ಸಮನ್ವಯ ಸಮಿತಿ, ಭಾರತೀಯ ಬೌದ್ಧ ಮಹಾಸಭೆ, ಮಾದಿಗ ದಂಡೋರ ಹೋರಾಟ ಸಮಿತಿ ಹಾಗೂ ದಿ ಗ್ರೇಟ್ ಮಹಾರ್ ಸಾಮಾಜಿಕ ಸೇವಾ ಸಮಿತಿಯ ಪದಾಧಿಕಾರಿಗಳ ನಿಯೋಗದಿಂದ ಮಿನಿ ವಿಧಾನಸೌಧಕ್ಕೆ ತೆರಳಿ ಮಹಾರಾಷ್ಟ್ರ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಸಾವಿತ್ರಿ ಸಲಗರ ಅವರಿಗೆ ಸಲ್ಲಿಸಲಾಯಿತು.
ಅಂಬೇಡ್ಕರ್ ಮನೆ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಪುಸ್ತಕಗಳ ಸಂಗ್ರಹಣೆಗಾಗಿ ನಿರ್ಮಿಸಿರುವ ಮನೆಯ ಮೇಲೆ ದುಷ್ಕರ್ಮಿಗಳು ದಾಂಧಲೆ ನಡೆಸುವ ಮೂಲಕ ಮನೆಯ ಹೊರಗಡೆ ಇರುವ ಹೂವಿನ ಕುಂಡಗಳು, ಸಿಸಿಟಿವಿ ಕ್ಯಾಮೆರಾ, ಮನೆಯ ಕಿಟಕಿ ಗಾಜುಗಳು ಒಡೆದು ಹಾಕಿದ್ದು ತೀರಾ ಖಂಡನೀಯ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ದಾಂಧಲೆ ನಡೆಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಬೇಕು ಮತ್ತು ರಾಜಗೃಹ ನಿವಾಸಕ್ಕೆ ಹಾಗೂ ಡಾ. ಅಂಬೇಡ್ಕರ್ ಅವರ ಕುಟುಂಬದ ಸದಸ್ಯರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.