ವಿಜಯ್ ಸಂಕಲ್ಪ ರಥಯಾತ್ರೆಗೆ ಅಮಿತ್ ಶಾ ಚಾಲನೆ ಬೀದರ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಚರಿಸುವ ಬಿಜೆಪಿಯ ವಿಜಯ ಸಂಕಲ್ಪ ರಥಯಾತ್ರೆಗೆ ಬಸವಾದಿ ಶರಣರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಚಾಲನೆ ನೀಡಿದರು.
ಅನುಭವ ಮಂಟಪದಲ್ಲಿ ರಥಯಾತ್ರೆಗೆ ಚಾಲನೆ ನೀಡಿದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಲ್ಯಾಣದಿಂದ ಆರಂಭವಾಗುವ ಯಾತ್ರೆಯು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಯ 43 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ರಾಜ್ಯದ ನಾಲ್ಕು ಯಾತ್ರೆಗಳು 31 ಜಿಲ್ಲೆಯ, 224 ಕ್ಷೇತ್ರದಲ್ಲಿ 8 ಸಾವಿರ ಕಿ.ಮೀ. ಸಂಚರಿಸಲಿದೆ. 100ಕ್ಕೂ ಅಧಿಕ ರೋಡ್ ಶೋ, 80 ಸಭೆ, 200ಕ್ಕೂ ಅಧಿಕ ಸಮಾಜದ ಬೈಠಕ್ ಜರುಗಲಿವೆ. 50ಕ್ಕೂ ಅಧಿಕ ರಾಷ್ಟ್ರೀಯ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‍ದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ದುರ್ಬಿನ ಹಾಕಿಕೊಂಡು ನೋಡಿದರೂ ಸಿಗುತ್ತಿಲ್ಲ. ಮೂರು ರಾಜ್ಯದಲ್ಲಿ ಎರಡನೇ ಬಾರಿಗೆ ಎನ್‍ಡಿಎ ಮೈತ್ರಿಕೂಟ ಆಡಳಿತಕ್ಕೆ ಬಂದಿದೆ. ಇದು ಮೋದಿ ಜಾದು ಎಂದು ಹೇಳಿದರು.
ಶ್ರೀರಾಮ ಜನಿಸಿದ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸುವ ವಿಷಯವನ್ನ ಕಾಂಗ್ರೆಸ್ ನಿರ್ಲಕ್ಷ್ಯ ಮಾಡುತ್ತಾ, ಮುಂದುಡುತ್ತಾ ಬಂದಿತು. ಆದರೆ, ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ರಾಮ ಮಂದಿರ ಶಿಲಾನ್ಯಾಸ ಮಾಡಿದರು. ಕಾಶಿ ವಿಶ್ವನಾಥ ಕಾರಿಡಾರ್, ಕೇದಾರನಾಥ, ಭದ್ರಿನಾಥ, ಸೋಮನಾಥ ಮಂದಿರ ಅಭಿವೃದ್ಧಿಯನ್ನು ಮಾಡಿದ್ದಾರೆ. ಇಲ್ಲಿನ ಅನುಭವ ಮಂಟಪ ನಿರ್ಮಾಣ ಮಾಡುತ್ತಿರುವುದು ಬಿಜೆಪಿ ಸರ್ಕಾರ. ದೇಶದ ಧಾರ್ಮಿಕ ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮಾತನಾಡಿದರು.
ಇದನ್ನೂ ಓದಿ:ಬೀದರ್: ಗುರುದ್ವಾರಕ್ಕೆ ಚುನಾವಣಾ ಚಾಣಕ್ಯ ಅಮಿತ್ ಶಾ ಭೇಟಿ- ವಿಡಿಯೋ
ಈ ವೇಳೆ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ರಾಜ್ಯ ಸಚಿವರಾದ ಬಿ.ಶ್ರೀರಾಮುಲು, ಶಂಕರ್ ಪಾಟೀಲ್ ಮುನೇನಕೊಪ್ಪ, ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯ ಸಹ ಪ್ರಭಾರಿ ಡಿ.ಕೆ. ಅರುಣಾದೇವಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಎನ್. ರವಿಕುಮಾರ, ಸಿದ್ಧರಾಜು, ಕಲಬುರಗಿ ಸಂಸದ ಉಮೇಶ್ ಜಾಧವ್, ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ್, ಸುಭಾಷ್ ಗುತ್ತೇದಾರ, ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ. ಮುಳೆ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಶಶೀಲ್ ನಮೋಶಿ, ಬಾಬುರಾವ್ ಚಿಂಚನಸೂರ್, ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೇದಾರ, ಸುನೀಲ ವಲ್ಲಾಪುರೆ, ಅಮರನಾಥ ಪಾಟೀಲ್, ಮಂಡಲ ಅಧ್ಯಕ್ಷ ಅಶೋಕ ವಕಾರೆ, ನಗರ ಅಧ್ಯಕ್ಷ ಅರವಿಂದ ಮುತ್ಯಾ ಇತರರಿದ್ದರು.
ಇದನ್ನೂ ಓದಿ:ಮೋದಿ ಮ್ಯಾಜಿಕ್ ಈಶಾನ್ಯ, ಗುಜರಾತ್, ಯುಪಿ ಸೇರಿ ಕರ್ನಾಟಕದಲ್ಲೂ ಕೆಲಸ ಮಾಡುತ್ತಿದೆ: ಅಮಿತ್ ಶಾ