ಬಸವಕಲ್ಯಾಣ: ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಬಸವಕಲ್ಯಾಣ ನಾಗರಿಕರಿಗೆ ಸದ್ಯಕ್ಕೆ ಇದರಿಂದ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಶಂಕಿತ ಡೆಂಗ್ಯೂಗೆ ತುತ್ತಾಗಿ ಜನ ಆಸ್ಪತ್ರೆ ಸೇರುತ್ತಿರುವುದು ಒಂದಡೆಯಾದರೆ, ಡೆಂಗ್ಯೂ ಜ್ವರ ನಿಯಂತ್ರಣಗೊಳಿಸುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಜ್ವರದ ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮನೆ, ಮನೆಗಳಿಗೆ ತೆರಳುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಹೊಸ ಸವಾಲುಗಳು ಎದುರಾಗುತ್ತಿವೆ.
ನಿಯಂತ್ರಣಕ್ಕೆ ಬಾರದ ಡೆಂಗ್ಯೂ: ನಗರಸಭೆ ಅಶುದ್ಧ ನೀರೇ ಕಾರಣವಂತೆ! ಮನೆಯಲ್ಲಿ ವಾರಗಟ್ಟಲೆ ಸಂಗ್ರಹಿಸಿ ಇಡಲಾಗುವ ಶುದ್ಧ ನೀರಿನಲ್ಲಿಯೇ ಡೆಂಗ್ಯೂ ಜ್ವರ ಹರಡುವ ಈಡಿಸ್ ಜಾತಿ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಸಂಗ್ರಹಿಸಿ ಇಡಲಾದ ನೀರು ಖಾಲಿ ಮಾಡಿ ಎಂದು ಸಲಹೆ ನೀಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಜನ ತರಾಟೆಗೆ ತೆಗೆದುಕೊಳ್ಳುತಿದ್ದಾರೆ. ಇಂತಹ ಪರಿಸ್ಥಿಯಲ್ಲಿ ಡೆಂಗ್ಯೂ ಜ್ವರ ಕಡಿಮೆ ಮಾಡಲು ಹೇಗೆ ಸಾಧ್ಯ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಅಳಲು ತೋಡಿಕೊಳ್ಳುತಿದ್ದಾರೆ.
ನಗರಸಭೆಯಿಂದ ನಲ್ಲಿಗಳ ಮೂಲಕ ನಗರಕ್ಕೆ ಸರಬರಾಜು ಮಾಡಲಾಗುತ್ತಿರುವ ನೀರೇ ಅಶುದ್ಧವಾಗಿವೆ. ನಲ್ಲಿ ನೀರು ಹಿಡಿದಿಟ್ಟುಕೊಂಡ ಮಾರನೇ ದಿನವೇ ನೀರಿನಲ್ಲಿ ಹುಳುಗಳು ಉತ್ಪತ್ತಿಯಾಗುತ್ತಿವೆ. ಒಂದು ಏರಿಯಾಗೆ ಒಂದು ದಿನ ನೀರು ಬಂದರೆ, ಮತ್ತೆ ಒಂದು ವಾರ ನೀರು ಬರಲ್ಲ. ಹೀಗಾಗಿ ನೀರು ಸಂಗ್ರಹಿಸಿ ಇಡುವದು ಅನಿವಾರ್ಯವಾಗಿದೆ. ನೀವು ಬಂದು ನೀರು ಖಾಲಿ ಮಾಡಿ ಅಂದ್ರೆ ಹೇಗೆ? ದಿನ ಬಳಕೆಗೆ ನೀರು ಎಲ್ಲಿಂದ ತರಬೇಕು ಅಂತ ನೀವೆ ಹೇಳಿ ಅಂತ ಜನ ಪ್ರಶ್ನಿಸುತಿದ್ದಾರೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ನಗರಸಭೆಯಿಂದ ನೀರು ಸರಬರಾಜು ಮಾಡಲಾಗುತ್ತಿರುವ ಪೈಪ್ ಲೈನ್‌ಗಳಲ್ಲೇ ದೋಷವಿದ್ದು, ಅಲ್ಲಲ್ಲಿ ಪೈಪ್ಗಳು ಒಡೆದ ಕಾರಣ ಚರಂಡಿ ನೀರು ಕೂಡ ಕುಡಿಯುವ ನೀರಿನಲ್ಲಿ ಸೇರಿಕೊಂಡು ಮನೆಗಳಿಗೆ ಬರುತ್ತಿದೆ. ಮನೆ ಬಳಕೆಗೆ ಸೇರಿದಂತೆ ಬಹುತೇಕ ಜನರು ಕುಡಿಯಲು ಸಹ ಇಂತಹ ಅಶುದ್ಧ ನೀರನ್ನ ಬಳಕೆ ಮಾಡಿಕೊಳ್ಳುತಿದ್ದಾರೆ. ಇದರಿಂದ ನೀರಿನಲ್ಲಿ ಡೆಂಗ್ಯೂ ಹರಡುವ ಈಡಿಸ್ ಜಾತಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ನೀರಿನ ವ್ಯವಸ್ಥೆ ಸುಧಾರಿಸದ ಹೊರತು ಡೆಂಗ್ಯೂ ಸೇರಿದಂತೆ ಇತರ ಸಾಂಕ್ರಾಮಿಕ ಕಾಯಿಲೆಗಳು ತಡೆಗಟ್ಟವದು ಸಾಧ್ಯವಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಸಿಬ್ಬಂದಿ.