ಬೀದರ್: ಮನೆಯ ಪಕ್ಕದಲ್ಲಿದ್ದ ತಿಪ್ಪೆಗುಂಡಿಗೆ ಅವಳಿ ಮಕ್ಕಳಿಬ್ಬರು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ನಗರದ ಶಿವಾಜಿ ಚೌಕ್ ಬಳಿ ನಡೆದಿದೆ.
ಮನೆ ಪಕ್ಕದ ತಿಪ್ಪೆಗುಂಡಿಗೆ ಬಿದ್ದು ಸಾವಿನಲ್ಲಿ ಒಂದಾದ ಅವಳಿ ಮಕ್ಕಳು - ಶಿವಾಜಿ ಚೌಕ್
ಮನೆಯ ಪಕ್ಕದಲ್ಲಿದ್ದ ತಿಪ್ಪೆ ಗುಂಡಿಯಲ್ಲಿ ಮಳೆಯ ಕೊಳಚೆ ನೀರು ತುಂಬಿನಿಂತಿದ್ದು, ಅವಳಿ ಮಕ್ಕಳಿಬ್ಬರು ತಿಪ್ಪೆಗುಂಡಿಗೆ ಜಾರಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ನಡೆದಿದೆ.
ನಿತೀನ್ ಸೂರ್ಯವಂಶಿ ಅವರ ನಾಲ್ಕೂವರೆ ವರ್ಷದ ಅವಳಿ ಮಕ್ಕಳಾದ ದರ್ಶನ್ ಮತ್ತು ಆರ್ಯನ್ (ಸೋಹಂ ಮತ್ತು ಶಿವಂ) ಎಂದು ಗುರುತಿಸಲಾಗಿದೆ. ನಿನ್ನೆ ಬೆಳಿಗ್ಗೆ 11ರ ಸುಮಾರಿಗೆ ಮನೆ ಪಕ್ಕವೇ ಆಟವಾಡುತಿದ್ದ ಮಕ್ಕಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿವೆ. ಮಕ್ಕಳು ಕಾಣಲಿಲ್ಲ ಎಂದು ಬೆಳಗ್ಗೆಯಿಂದ ರಾತ್ರಿವರೆಗೆ ಕುಟುಂಬದವರು ಹುಡುಕಾಟದಲ್ಲಿ ತೊಡಗಿದ್ದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.
ಆದರೆ, ರಾತ್ರಿ 11ರ ಸುಮಾರಿಗೆ ಮನೆ ಪಕ್ಕದಲ್ಲೇ ಇರುವ ತಿಪ್ಪೆಗುಂಡಿಯಲ್ಲಿ ಮಕ್ಕಳ ಶವ ಪತ್ತೆಯಾಗಿದೆ. ಮಳೆ ನೀರಿನೊಂದಿಗೆ ಕೊಳಚೆ ನೀರು ಸೇರಿ ತುಂಬಿನಿಂತಿದ್ದ ತಿಪ್ಪೆಗುಂಡಿಯಲ್ಲಿ ಬಾಲಕರಿಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಬಾಲಕರ ಶವ ಪತ್ತೆಮಾಡಿದರು. ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್ ಹಾಗೂ ಪಿಎಸ್ಐ ಸವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.