ಬೀದರ್: ಕೊರೊನಾ ಸೋಂಕಿನಿಂದ ಬಳಲಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಜನರು ಹೊರಾಡುತ್ತಿದ್ದಾರೆ. ಇಂತಹ ಸಂದರ್ಭವನ್ನು ಬಳಸಿಕೊಂಡು ನಕಲಿ ಕಂಪನಿಯ ಹೆಸರಿನಲ್ಲಿ ವಂಚನೆ ಮಾಡಲು ಮುಂದಾಗಿದ್ದ ಇಬ್ಬರನ್ನು ಬೀದರ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ಸಂಬಂಧಿಕರಿಗೆ ಕೊವಿಡ್ ಚಿಕಿತ್ಸೆ ಕುರಿತು ಚುಚ್ಚುಮದ್ದಿಗಾಗಿ HLL life care limited bengluru ಇವರ ಇ-ಮೇಲೆ ವಿಳಾಸಕ್ಕೆ ನೋಂದಣಿ ಮಾಡಿದ್ದರು. ಆರೋಪಿಗಳು ಈ ಕಂಪನಿಯ ನಕಲಿ ವೆಬ್ಸೈಟ್ ತಯಾರಿಸಿ ಪ್ರತೀ ಚುಚ್ಚುಮದ್ದಿನ ಬೆಲೆ 42,687 ರೂಪಾಯಿಯಂತೆ ಎರಡು ಚುಚ್ಚುಮದ್ದಿನ 85,374 ರೂಪಾಯಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಈ ಕುರಿತು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಬೀದರ್ ಪೊಲೀಸರು, ಬೆಂಗಳೂರು ನಗರದ ಮೇಡಿ ಅಗ್ರಹಾರ ಯಲಹಂಕಾದ ಕಟ್ಟಡವೊಂದರಲ್ಲಿ ಆರೋಪಿಗಳು ಇರುವುದನ್ನು ಪತ್ತೆ ಹಚ್ಚಿದ್ದಾರೆ.
ಆದಿತ್ಯನಗರ ವಿದ್ಯಾನಾರಾಯಣಪುರ ಬೆಂಗಳೂರಿನ ನಿವಾಸಿ ಮಹಮ್ಮದ್ ಇಸ್ಮಾಯಿಲ್ ಖಾದ್ರಿ ಹಾಗೂ ನೈಜೀರಿಯಾ ದೇಶದ ಅಳದೆ ಅಬ್ದುಲ್ಲಾ ಇಸೂಫ್ ಎಂಬುವರು ಕೃತ್ಯದಲ್ಲಿ ಪಾಲ್ಗೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಕೂಡಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಕೊವಿಡ್ ಸೋಂಕಿನ ಚಿಕಿತ್ಸೆಗಾಗಿ ಇಂಜೆಕ್ಷನ್ ನೋಂದಾಯಿಸಿದವರಿಗೆ ಫೋನ್ ಮಾಡಿ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡ್ತಿರುವ ಬಗ್ಗೆ ಬಾಯಿ ಬಿಚ್ಚಿದ್ದಾರೆ. ಬಂಧಿತ ಆರೋಪಿಗಳಿಂದ 110 ವಿವಿಧ ಕಂಪನಿಗಳ ಸಿಮ್ ಕಾರ್ಡ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಬೀದರ್ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.