ಬಸವಕಲ್ಯಾಣ: ನಿಯಮ ಮೀರಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳ ತಂಡ ಸುಮಾರು 50 ಸಾವಿರಕ್ಕೂ ಅಧಿಕ ಮೌಲ್ಯದ ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡಿದೆ.
ನಗರಸಭೆ ಪೌರಾಯುಕ್ತ ಮೀನಾಕುಮಾರಿ ಬೋರಾಳಕರ್ ನಗರದ ಮುಖ್ಯ ರಸ್ತೆ ಹಲಸೂರು ರಸ್ತೆ, ತರಕಾರಿ ಮಾರ್ಕೆಟ್ ಸೇರಿದಂತೆ ವಿವಿಧೆಡೆ ನಗರ ಸಭೆ ಅಧಿಕಾರಿ ಹಾಗೂ ಸಿಬ್ಬಂದಿ ತಂಡ, ಕಿರಾಣಿ ಅಂಗಡಿ ಹಾಗೂ ಗೊಡೌನ್‌ಗಳಲ್ಲಿ ಸಂಗ್ರಹಿಸಿ ಇಡಲಾಗಿದ್ದ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದರು.
ಕೊರೊನಾ ಹರಡುವ ಭೀತಿಯಿಂದ ರಸ್ತೆ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದಕ್ಕೆ ನಿಷೇಧಿಸಲಾಗಿದೆ. ಆದರೆ ಗುಟ್ಕಾ ಸೇವಿಸುವ ವ್ಯಕ್ತಿಗಳು ಎಲ್ಲೆಂದರಲ್ಲಿ ಉಗುಳುವ ಸಾಧ್ಯತೆ ಇರುವ ಕಾರಣ ಅಂಗಡಿಗಳಲ್ಲಿ ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನ ಮಾರಾಟ ಮಾಡಲು ನಿಷೇಧಿಸಲಾಗಿದೆ.
ಅನುಮತಿ ಇಲ್ಲದಿದ್ದರೂ ಅಂಗಡಿಗಳನ್ನು ತೆರದು ವ್ಯಾಪಾರ ವಹಿವಾಟು ನಡೆಸಿದ ಬಟ್ಟೆ ಅಂಗಡಿ ಸೇರಿದಂತೆ ವಿವಿಧ ಪ್ರಕಾರದ ಸುಮಾರು 15 ಅಂಗಡಿಗಳ ಮೇಲೆ ರವಿವಾರ ದಾಳಿ ನಡೆಸಿ ಅಂಗಡಿಗಳನ್ನು ಸೀಜ್ ಮಾಡಿದ ಅಧಿಕಾರಿಗಳು, ಸೋಮವಾರ ಎಲ್ಲಾ ಅಂಗಡಿಗಳಿಗೆ ತಲಾ 500 ರೂ. ದಂಡ ವಿಧಿಸಿ ಎಚ್ಚರಿಕೆಯ ನೋಟಿಸ್ ನೀಡಿದ್ದಾರೆ.
ಮೊದಲ ಬಾರಿಗೆ ನಿಯಮ ಉಲ್ಲಂಘಿಸುವ ಅಂಗಡಿಗಳಿಗೆ ಇಷ್ಟು ದಂಡ ವಿಧಿಸಲಾಗಿದ್ದು, ಮುಂದಿನ ಬಾರಿ ಮತ್ತೆ ಅಂಗಡಿಗಳನ್ನು ತೆರದಲ್ಲಿ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ನಗರಸಭೆ ಎಚ್ಚರಿಸಿದೆ.