ಬಸವಕಲ್ಯಾಣ (ಬೀದರ್): ತಾಲೂಕಿನಲ್ಲಿ ಕೊರೊನಾ ಕಾಟ ಮುಂದುವರೆದಿದ್ದು, ಗ್ರಾಮೀಣ ಪ್ರದೇಶದ ಮೂವರು ವೈದ್ಯರು ಸೇರಿದಂತೆ ತಾಲೂಕಿನಲ್ಲಿ ಐವರಿಗೆ ಸೋಂಕು ದೃಢಪಟ್ಟಿದೆ.
ಇದುವರೆಗೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 264ಕ್ಕೆ ಏರಿದ್ದು, 9 ಜನ ಬಲಿಯಾಗಿದ್ದಾರೆ. ತಾಲೂಕಿನ ಮಂಠಾಳ ಪಿಎಚ್‌ಸಿಯ 25 ವರ್ಷದ ವೈದ್ಯಾಧಿಕಾರಿಗಳಿಗೆ ಮತ್ತು ಇದೇ ಪಿಎಚ್‌ಸಿಯಿಂದ ನಿವೃತ್ತರಾದ 70 ವರ್ಷದ ವೈದ್ಯಾಧಿಕಾರಿಯೊಬ್ಬರಿಗೆ ಪಾಸಿಟಿವ್ ಬಂದಿದೆ ಎಂದು ತಿಳಿದು ಬಂದಿದೆ.
ಬಾಲ್ಕಿಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವ ನಗರದ 41 ವರ್ಷದ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಹುಲಸೂರ ಬಳಿಯ ಹಾಲಹಳ್ಳಿ ಗ್ರಾಮದ 60 ವರ್ಷದ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 264ಕ್ಕೆ ತಲುಪಿದೆ.
ಇನ್ನು ತಾಲೂಕಿನ ರಾಜೇಶ್ವರಿ ಗ್ರಾಮದ 70 ವರ್ಷ ಖಾಸಗಿ ವೈದ್ಯರೊಬ್ಬರಿಗೆ ಸೋಂಕಿರುವುದು ಪತ್ತೆಯಾಗಿದ್ದು, ಇವರು ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದಲ್ಲದೆ ಮಂಠಾಳ ಸಮೀಪದ ಕಾಬಂಳೆವಾಡಿಯಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಮಹಿಳೆಯೊಬ್ಬಳಿಗೆ ಮಂಠಾಳ ಪಿಎಚ್‌ಸಿಯ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದರು. ನಂತರ ಮಹಿಳೆಗೆ ಸೋಂಕು ದೃಢಪಟ್ಟಿತ್ತು. ಈಗ ಚಿಕಿತ್ಸೆ ನೀಡಿದ ವೈದ್ಯರಿಗೂ ಸೋಂಕು ದೃಢಪಟ್ಟಿದೆ. ವೈದ್ಯರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಠಾಳ ಪಿಎಚ್‌ಸಿ ಕೇಂದ್ರವನ್ನು ಸ್ಯಾನಿಟೈಸ್ ಮಾಡಲಾಗಿದೆ.