ಬೀದರ್: ಔರಾದ ತಾಲೂಕಿನಾದ್ಯಂತ ಕಳೆದ ಎರಡು ಮೂರು ತಿಂಗಳುಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಕೋಣೆ ಬೀಗ ಮುರಿದು ಆಹಾರ ಧಾನ್ಯ ಹಾಗೂ ಅಡುಗೆ ಸಾಮಾನುಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಔರಾದ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ವಿಲಾಸ ರಾಠೋಡ, ದೀಪಕ್ ಹುಲ್ಯಾಳ್, ಅಂಕುಶ್ ಬಿರಾದಾರ್ ಹುಲ್ಯಾಳ್ ಹಾಗೂ ಸಾಯಿನಾಥ ಶಿಂಧೆ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 8 ಗ್ಯಾಸ್ ಸಿಲಿಂಡರ್, ಮೂರು ಕ್ವಿಂಟಲ್ ಅಕ್ಕಿ, 140 ಕೆಜಿ ಗೋಧಿ, ಸೇರಿದಂತೆ 75 ಸಾವಿರ ರೂಪಾಯಿ ಮೌಲ್ಯದ ಸಾಮಗ್ರಿಗಳು ಹಾಗೂ ಕ್ರೂಸರ್ ಜೀಪ್ ಜಪ್ತಿ ಮಾಡಿದ್ದಾರೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್, ಸಹಾಯಕ ಪೊಲೀಸ್ ಅಧೀಕ್ಷಕ ಪ್ರಥ್ವಿಕ್ ಶಂಕರ್ ಮಾರ್ಗದರ್ಶನದಲ್ಲಿ, ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ ನೇತೃತ್ವ ತಂಡದಲ್ಲಿ ಪಿಎಸ್ಐಗಳಾದ ಉಪೇಂದ್ರ ಕುಮಾರ್, ಕಾಶಿನಾಥ್, ಸಿದ್ದಲಿಂಗ, ಬಸವರಾಜ ಕೋಟೆ ಹಾಗೂ ಪೊಲೀಸ್ ಸಿಬ್ಬಂದಿಗಳಾದ ನರಸಾರೆಡ್ಡಿ, ಕೊಟ್ರೇಶ್, ಜ್ಞಾನದೇವ, ವಿಲಾಸ, ಸಂಜು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಇನ್ನು ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಎಸ್ಪಿ ಡೆಕ್ಕಾ ಕಿಶೋರ್ ಬಾಬು ಸೂಕ್ತ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಜೋಳದ ವ್ಯಾಪಾರಿ ಸೋಗಿನಲ್ಲಿ ಮನೆಗಳ್ಳತನ: ಆರೋಪಿ ಬಂಧನ