ಬಸವಕಲ್ಯಾಣ/ ಬೀದರ್:ಕೊರೊನಾ ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರದಿಂದ ಜಾರಿಯಾಗಿರುವ ಲಾಕ್‌ಡೌನ್ ಆದೇಶವನ್ನು ಪ್ರತಿಯೊಬ್ಬರು ಪಾಲಿಸಬೇಕು. ಜನರು ತಮ್ಮ, ತಮ್ಮ ಮನೆಯ ಓಣಿಗಳನ್ನು ಬಿಟ್ಟು ಹೊರಗೆ ಓಡಾಡದಂತೆ ನೋಡಿಕೊಳ್ಳಬೇಕು ಎಂದು ನಗರಸಭೆ ನೂತನ ಸದಸ್ಯರಿಗೆ ಸಿಪಿಐ ಜೆ. ಎಸ್. ನ್ಯಾಮಗೌಡರ್ ಮನವಿ ಮಾಡಿದರು.
ನಗರದ ಕೋಟೆ ಬಳಿಯ ಬಯಲು ಪ್ರದೇಶದಲ್ಲಿ ಕರೆದಿದ್ದ ನಗರಸಭೆ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಮಾರಕ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಜವಾಬ್ದಾರಿ ವಹಿಸಿಕೊಂಡು ಆಡಳಿತಕ್ಕೆ ಸಹಕರಿಸಬೇಕು ಎಂದು ವಿನಂತಿಸಿಕೊಂಡರು. ಕೊರೊನಾ ಸೋಂಕಿನಿಂದ ಇದುವರೆಗೆ ಜಗತ್ತಿನಲ್ಲಿ ಲಕ್ಷಾಂತರ ಜನ ಬಳಲುತ್ತಿದ್ದಾರೆ. ಸಾವಿರಾರು ಜನ ಸಾವನಪ್ಪಿದ್ದಾರೆ. ಭಾರತದಲ್ಲಿ ಆರುನೂರಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದ್ದು, 10 ಜನ ಈಗಾಗಲೇ ಬಲಿಯಾಗಿದ್ದಾರೆ. ಹೀಗಾಗಿ ದೇಶದೆಲ್ಲೆಡೆ ಭಯಾನಕ ವಾತಾವರಣ ನಿರ್ಮಾಣವಾಗಿದ್ದು, ಕೊರೊನಾ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತದಿಂದ ಕೈಗೊಳ್ಳಲಾಗುತ್ತಿರುವ ನಿಯಮಗಳನ್ನು ಪಾಲಿಸುವಂತೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.